ಮಂಗಳೂರು, ಅಗಸ್ಟ್. 12: ಪ್ರಾಚೀನ ಆಯುರ್ವೇದ ಗುರುಕುಲ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಮೂರುಕಜೆಯಲ್ಲಿ ಅಜೇಯ ಟ್ರಸ್ಟ್ ವತಿಯಿಂದ ಮೈತ್ರೇಯೀ ಆಯುರ್ವೇದ ಗುರುಕುಲ ಆರಂಭಿಸಲಾಗುತ್ತಿದೆ ಎಂದು ಮೈತ್ರೇಯೀ ಆಯುರ್ವೇದ ಗುರುಕುಲದ ಪ್ರಾಂಶುಪಾಲ ಡಾ.ರವಿಗಣೇಶ್ ಮೊಗ್ರ ತಿಳಿಸಿದರು.

ನಗರದ ಓಷನ್ ಪರ್ಲ್ ಹೋಟೆಲ್‌ನಲ್ಲಿ ಇಂದು
ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಅಜೇಯ ಟ್ರಸ್ಟ್ ವತಿಯಿಂದ ಕಳೆದ 32 ವರ್ಷಗಳಿಂದ ವಿಟ್ಲದ ಮೂರುಕಜೆಯಲ್ಲಿ ಮೈತ್ರೇಯೀ ಗುರುಕುಲವನ್ನು ನಡೆಸಲಾಗುತ್ತಿದೆ. ಇಲ್ಲಿ ಬಾಲಕಿಯರಿಗೆ ಸಂಸ್ಕೃತ ಆಧಾರಿತ ಪಂಚಮುಖೀ ಶಿಕ್ಷಣದೊಂದಿಗೆ ಉಚಿತ ವಸತಿ ಮತ್ತು ಶಿಕ್ಷಣ ನೀಡಲಾಗುತ್ತಿದೆ. ವೇದ, ಯೋಗ, ವಿಜ್ಞಾನ, ಕೃಷಿ ಹಾಗೂ ಕಲಾಕೌಶಲಗಳ ಜೊತೆಗೆ ಆಯುರ್ವೇದಕ್ಕೂ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರದ ವಿಶಿಷ್ಟ ಯೋಜನೆಯಡಿ ಪ್ರತಿ ಐದು ಕೋಟಿ ಜನಸಂಖ್ಯೆಗೆ ಒಂದು ಆಯುರ್ವೇದ ಗುರುಕುಲ ಸ್ಥಾಪನೆಗೆ ಅವಕಾಶವಿದ್ದು, ಕರ್ನಾಟಕದಲ್ಲಿ ಈ ಯೋಜನೆಯಡಿ ಮೊದಲ ಅವಕಾಶ ಮೈತ್ರೇಯೀ ಗುರುಕುಲಕ್ಕೆ ದೊರೆತಿದೆ. ಮಹಿಳೆಯರಿಗೆ ಮಾತ್ರ ಶಿಕ್ಷಣ ನೀಡುವ ಈ ಯೋಜನೆ ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ಅವಕಾಶ ಕಲ್ಪಿಸಲಿದೆ ಎಂದು ಅವರು ಹೇಳಿದರು.

ಏಳೂವರೆ ವರ್ಷಗಳ ಶಿಕ್ಷಣ: ಆಯುರ್ವೇದ ಗುರುಕುಲದಲ್ಲಿ 7.5 ವರ್ಷಗಳ ವಸತಿ ಶಿಕ್ಷಣ ವ್ಯವಸ್ಥೆ ಇರಲಿದೆ.10ನೇ ತರಗತಿ ಉತ್ತೀರ್ಣ ಬಾಲಕಿಯರು ಪ್ರಿ-ಆಯುರ್ವೇದ ಕಾರ್ಯಕ್ರಮದ ಮೂಲಕ ಪ್ರವೇಶ ಪಡೆದು ಮುಂದಿನ ಹಂತದಲ್ಲಿ BAMS ಶಿಕ್ಷಣವನ್ನು ಮುಂದುವರಿಸಬಹುದಾಗಿದೆ. ಶಿಕ್ಷಣದ ಹೆಚ್ಚಿನ ಭಾಗವನ್ನು ಸಂಸ್ಕೃತ ಆಧಾರಿತವಾಗಿ ನೀಡಲಾಗುತ್ತಿದ್ದು, ಗುರುಕುಲದ ಸಾಂಪ್ರದಾಯಿಕ ವಾತಾವರಣದಲ್ಲೇ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗುತ್ತದೆ.

ಟ್ರಸ್ಟಿ ಡಾ.ಸುಧಾ ರಾವ್ ಮಾತನಾಡಿ, ಮಹಿಳೆಯರಿಗೆ ಮಾತ್ರ ಆಯುರ್ವೇದ ಶಿಕ್ಷಣ ನೀಡುವುದು ಈ ಯೋಜನೆಯ ವಿಶೇಷತೆಯಾಗಿದೆ. ವಿಟ್ಲದ ಗ್ರಾಮೀಣ ಪ್ರದೇಶದಲ್ಲಿರುವ ಗುರುಕುಲದ ಆವರಣದಲ್ಲೇ ಆಯುರ್ವೇದ ಕಾಲೇಜು ಸ್ಥಾಪಿಸಲಾಗುವುದು. ಇದರಿಂದ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಅವಕಾಶ ದೊರೆಯಲಿದೆ ಎಂದರು.

ಗುರುಕುಲದ ಭಾಗವಾಗಿ 60 ಹಾಸಿಗೆಗಳ ಆಯುರ್ವೇದ ಆಸ್ಪತ್ರೆ ಸ್ಥಾಪಿಸುವ ಯೋಜನೆಯೂ ಇದೆ. ಆಸ್ಪತ್ರೆಯ ಮೂಲಕ ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆಯುರ್ವೇದ ಚಿಕಿತ್ಸೆ ಒದಗಿಸುವುದರ ಜೊತೆಗೆ BAMS ವಿದ್ಯಾರ್ಥಿನಿಯರಿಗೆ ಪ್ರಾಯೋಗಿಕ ಹಾಗೂ ಕ್ಲಿನಿಕಲ್ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಗುರುಕುಲದಲ್ಲಿ ಈಗಾಗಲೇ ಸಂಸ್ಕೃತದಲ್ಲಿ ಶಿಕ್ಷಣ, ವೇದ, ವಿಜ್ಞಾನ, ಗೋಶಾಲೆ ಹಾಗೂ ಕೃಷಿಯಂತಹ ಚಟುವಟಿಕೆಗಳು ನಡೆಯುತ್ತಿದ್ದು, ಇದೇ ವಾತಾವರಣದಲ್ಲಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪಿಸುವ ಮೂಲಕ ಭಾರತೀಯ ಜ್ಞಾನ ಪರಂಪರೆಯನ್ನು ಮುಂದುವರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಡಾ.ಸುಧಾ ರಾವ್ ಹೇಳಿದರು.

ಆಯುರ್ವೇದದ ಮೂಲಗ್ರಂಥಗಳು ಹಾಗೂ ಭಾರತೀಯ ವೈದ್ಯಕೀಯ ಪರಂಪರೆಯ ಬಗ್ಗೆ ವಿದ್ಯಾರ್ಥಿನಿಯರಿಗೆ ಆಳವಾದ ಜ್ಞಾನ ನೀಡುವ ಮೂಲಕ ಸಮಾಜಕ್ಕೆ ಉತ್ತಮ ಆಯುರ್ವೇದ ವೈದ್ಯರನ್ನು ರೂಪಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು.

2026ನೇ ಸಾಲಿನ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಆಗಸ್ಟ್ 20 ಕೊನೆಯ ದಿನವಾಗಿದ್ದು, ಅರ್ಹ ವಿದ್ಯಾರ್ಥಿನಿಯರಿಗೆ ಯೋಜನೆಯ ಮಾಹಿತಿ ತಲುಪಿಸಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಟ್ರಸ್ಟ್ ಮನವಿ ಮಾಡಿದೆ.

ಪತ್ರಿಕಾಗೋಷ್ಠಿಯಲ್ಲಿ ಅಜೇಯ ಟ್ರಸ್ಟ್ ಅಧ್ಯಕ್ಷ ಸುಬ್ರಾಯ ಪೈ, ಕಾರ್ಯದರ್ಶಿ ರೂಪಲೇಖಾ ಉಪಸ್ಥಿತರಿದ್ದರು.

_Sathish Kapikad

Share.
Leave A Reply

Exit mobile version