
ಕುಂದಾಪುರ, ಜುಲೈ 31: ಶುಕ್ರವಾರ (ಇಂದು) ಮುಂಜಾನೆ ಉಡುಪಿ ಜಿಲ್ಲೆಯ ಕುಂದಾಪುರದ ಚರ್ಚ್ ರಸ್ತೆಯಲ್ಲಿನ ಹೋಲಿ ರೋಸರಿ ಚರ್ಚ್ ಮುಂಭಾಗ ವ್ಯಕ್ತಿಯೊಬ್ಬರನ್ನು ಪಿಸ್ತೂಲ್‌ನಿಂದ ಗುಂಡಿಕ್ಕಿ ಹತ್ಯೆಗೈದ ಘಟನೆ ಇದೀಗ ತಿರುವು ಪಡೆದುಕೊಂಡಿದೆ. ಹಣಕಾಸು ಹಾಗೂ ಇತರ ವ್ಯವಹಾರಗಳಿಗೆ ಸಂಬಂಧಿಸಿದ ಮನಸ್ತಾಪವೇ ಕೃತ್ಯಕ್ಕೆ ಕಾರಣ ಎಂದು ಶಂಕಿಸಲಾಗಿದೆ.
ಬಾರ್ಕೂರು ಕಚ್ಚೂರು ಮೂಲದ ಐವನ್ ರಿಚಾರ್ಡ್ ಮಸ್ಕರೇನಸ್ (ಮುನ್ನಾ) (46) ಎಂಬವರು ಘಟನೆಯಲ್ಲಿ ಮೃತಪಟ್ಟಿದ್ದು, ಗುಂಡು ಹಾರಿಸಿ ಬರ್ಬರವಾಗಿ ಹತ್ಯೆಗೈದ ಆರೋಪಿಯನ್ನು ಡೆರಿಕ್ ಕ್ರಾಸ್ತಾ ಎಂದು ಗುರುತಿಸಲಾಗಿದೆ.
ಡೆರಿಕ್ ಮತ್ತು ಐವನ್ ನಡುವೆ ಹಣಕಾಸಿನ ವ್ಯವಹಾರದ ವಿಚಾರವಾಗಿ ಗಲಾಟೆ ನಡೆದಿದ್ದು, ಜುಲೈ 30ರ ರಾತ್ರಿ ಆರಂಭವಾದ ಮಾತಿನ ಚಕಮಕಿ, ಜುಲೈ 31ರ ಮುಂಜಾನೆ ಭೀಕರ ತಿರುವು ಪಡೆದುಕೊಂಡಿದೆ. ಬಳಿಕ ಡೆರಿಕ್ ಲೊಕೇಶನ್ ಕಳುಹಿಸಿ ಕುಂದಾಪುರದ ಚರ್ಚ್ ರಸ್ತೆಯ ಹೋಲಿ ರೋಸಾರಿ ಚರ್ಚ್ ಎದುರಿಗೆ ಬರಲು ಸೂಚಿಸಿದ್ದಾನೆ ಎನ್ನಲಾಗಿದೆ.
ಐವನ್ ತಮ್ಮ ಮೊದಲ ಪತ್ನಿಯಾದ ಸೆಲ್ಮಾ ಮಸ್ಕರೆನ್ಸ್ ಅವರನ್ನು ತೊರೆದು ಬಾರ್ಕೂರು ಮೂಲದ ಮಹಿಳೆಯೊಂದಿಗೆ ಸಂಸಾರ ನಡೆಸುತ್ತಿದ್ದರು. ಶುಕ್ರವಾರ ಮುಂಜಾನೆ ಸುಮಾರು 3:15ರ ವೇಳೆಗೆ ಐವನ್ ಅವರು ಮಹಿಖೆಯೊಂದಿಗೆ ಕಾರಿನಲ್ಲಿ ಬಂದಿದ್ದಾಗ ಕುಂದಾಪುರ ಚರ್ಚ್ ಎದುರಿಗೆ ಈ ಘಟನೆ ನಡೆದಿದೆ.
ಸ್ಥಳಕ್ಕೆ ಥಾರ್ ಕಾರಿನಲ್ಲಿ ಬಂದ ಆರೋಪಿ ಡೆರಿಕ್, ಕಾರಿನಿಂದ ಇಳಿದ ಐವನ್ ಮೇಲೆ ಗನ್‌ನಿಂದ ಗುಂಡು ಹಾರಿಸಿದ್ದಾನೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು ತೀವೃ ರಕ್ತಸ್ರಾವಗೊಂಡ ಐವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮಾಹಿತಿ ತಿಳಿಸಿದೆ.
ಐವನ್ ಯಾನೆ ಮುನ್ನಾ ಈ ಹಿಂದೆ ಕುಕ್ಕಿಕಟ್ಟೆಯ ಪಿಟ್ಟಿ ನಾಗೇಶ ಕೊಲೆ ಕೇಸ್ ನಲ್ಲಿ ಆರೋಪಿಯಾಗಿದ್ದ.ಈತನ ಮೇಲೆ ಉಡುಪಿ ನಗರ ಠಾಣೆಯಲ್ಲಿ ರೌಡಿ ಶೀಟ್ ಇತ್ತು. ಮುನ್ನಾ ಮೊದಲು ಪಿಟ್ಟಿ ನಾಗೇಶ್ ನ ಡೈವರ್ ಆಗಿದ್ದ.ಯಾವುದೋ ದ್ವೇಷದಿಂದ ಪಿಟ್ಟಿ ನಾಗೇಶ್ ಕೊಲೆಯಲ್ಲಿ ಭಾಗಿಯಾಗಿದ್ದ.ಪಿಟ್ಟಿ ನಾಗೇಶ್ ನ ತಂಡ ಈತನ ಹತ್ಯೆಗಾಗಿ ಕೆಲವು ಬಾರಿ ಸಂಚು ರೂಪಿಸಿತ್ತು.
ಐವನ್ ಜೊತೆಗಿದ್ದ ಮಹಿಳೆ ಆರೋಪಿಯನ್ನು ಗುರುತು ಹಚ್ಚಿದ್ದು ಪರಾರಿಯಾದ ಆರೋಪಿ ಡೆರಿಕ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 67/2026ರಡಿ ಬಿಎನ್‌ಎಸ್ ಕಲಂ 103 ಹಾಗೂ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ 3 ಮತ್ತು 25ನೇ ಕಲಂಗಳಡಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿ ಡೆರಿಕ್ ಕ್ರಾಸ್ತಾ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಉಡುಪಿ ಎಸ್ಪಿ ಹರಿರಾಂ ಶಂಕರ್, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯಕ್, ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಸೇರಿದಂತೆ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲು ಯೋಜನೆ ರೂಪಿಸಿದ್ದಾರೆ.
ಕುಂದಾಪುರ : ನಡುರಸ್ತೆಯಲ್ಲಿ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಬರ್ಬರ ಹತ್ಯೆ – ಆರೋಪಿ ಪರಾರಿ
_Sathish Kapikad