ಕುಂದಾಪುರ, ಜುಲೈ 31: ವ್ಯಕ್ತಿಯೊಬ್ಬರನ್ನು ಪಿಸ್ತೂಲ್‌ನಿಂದ ಗುಂಡಿಕ್ಕಿ ಹತ್ಯೆಗೈದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ಚರ್ಚ್ ರಸ್ತೆಯಲ್ಲಿನ ಹೋಲಿ ರೋಸರಿ ಚರ್ಚ್ ಮುಂಭಾಗ ಇಂದು (ಶುಕ್ರವಾರ) ನಸುಕಿನ ವೇಳೆ ನಡೆದಿದೆ.

ಹತ್ಯೆಗೀಡಾದ ವ್ಯಕ್ತಿಯನ್ನು ಬಾರ್ಕೂರು ಕಚ್ಚೂರು ಮೂಲದ ಐವನ್ ರಿಚಾರ್ಡ್ ಮಸ್ಕರೇನಸ್ (ಮುನ್ನಾ) (46) ಎಂದು ಗುರುತಿಸಲಾಗಿದೆ.

ಐವನ್ ರಿಚಾರ್ಡ್ ಅವರು ಇಂದು ಮುಂಜಾನೆ 3.30ರ ಸುಮಾರಿಗೆ ತನ್ನ ಎರಡನೇ ಪತ್ನಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಕುಂದಾಪುರ ಚರ್ಚ್ ಮುಂಭಾಗ ಆರೋಪಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಐವನ್ ಅವರು ತಮ್ಮ ಕಾರಿನ ಸಮೀಪ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತೀವೃ ರಕ್ತಸ್ರಾವಗೊಂಡು ಐವನ್ ರಿಚಾರ್ಡ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆಗೆ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದ್ದು, ಹಣಕಾಸು ಅಥವಾ ಇನ್ಯಾವುದೋ ವ್ಯವಹಾರಕ್ಕೆ ಸಂಬಂಧ ಪಟ್ಟಂತೆ ಈ ಕೊಲೆ ನಡೆದಿರಬಹುದೆಂದು ಪ್ರಾಥಮಿಕ ತನಿಖೆ ವೇಳೆ ಅಂದಾಜಿಸಲಾಗಿದೆ.

ಮೃತರ ಪತ್ನಿ ಆರೋಪಿಯನ್ನು ಗುರುತು ಹಚ್ಚಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾದ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಉಡುಪಿ ಎಸ್ಪಿ ಹರಿರಾಂ ಶಂಕರ್, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯಕ್, ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಸೇರಿದಂತೆ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೀಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

_Sathish Kapikad

Share.
Leave A Reply

Exit mobile version