
ವರದಿ – ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು, ಅಗಸ್ಟ್.04 : ಸ್ಯಾಂಡಲ್ ವುಡ್‌ನ ಹೆಸರಾಂತ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಗೋಲ್ಡನ್ ಮೂವೀಸ್ ಬ್ಯಾನರ್‌ನಲ್ಲಿ ಪ್ರಥಮ ಬಾರಿಗೆ ತಯಾರಾದ ತುಳು ಚಲನಚಿತ್ರ ‘ಪಿಕ್ಚರ್‘ ಇದೇ ಬರುವ ಆಗಸ್ಟ್ 7ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಚಿತ್ರದ ಕುರಿತು ಮಾಹಿತಿ ನೀಡಲು ಇಂದು (ಮಂಗಳವಾರ) ತಮ್ಮ ಚಿತ್ರ ತಂಡದ ಜೊತೆ ಮಂಗಳೂರಿಗೆ ಆಗಮಿಸಿರುವ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಚಿತ್ರದ ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು ನಗರದ ಬಂಟ್ಸ್ ಹಾಸ್ಟೆಲ್ ಸಮೀಪವಿರುವ ಪ್ರತಿಷ್ಠಿತ ಹೊಟೇಲೊಂದರಲ್ಲಿ ಸುದ್ದಿಗೋಷ್ಠಿ ನಡೆಸಿ ಚಿತ್ರದ ಕುರಿತು ಮಾಹಿತಿ ನೀಡಿದರು
ತುಳು ಹಾಗೂ ಕನ್ನಡ ಭಾಷೆಯಲ್ಲಿ ಗೋಲ್ಡನ್ ಮೂವೀಸ್ ಬ್ಯಾನರ್‌ನಲ್ಲಿ ತಯಾರಾದ ಚಲನಚಿತ್ರ ‘ಪಿಕ್ಚರ್‘ ಆಗಸ್ಟ್ 7ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ನಿರ್ದೇಶಕ ಸಂದೀಪ್ ಬೆದ್ರ ಅವರು ಚಿತ್ರಕ್ಕೆ ಅಕ್ಷ್ಯನ್ ಕಟ್ ಹೇಳಿದ್ದಾರೆ. ಅತೀ ಹೆಚ್ಚು ಸಂಖ್ಯೆಯಲ್ಲಿ ಮಂಗಳೂರಿನ ಕಲಾವಿದರನ್ನೇ ಬಳಸಿ ಚಿತ್ರ ನಿರ್ಮಿಸಲಾಗಿದೆ. ಕಾಮಿಡಿ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರಕ್ಕೆ ಪುತ್ತೂರು ಮತ್ತು ಉಡುಪಿಯ ಪ್ರೀಮಿಯರ್ ಪ್ರದರ್ಶನಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ನಿರ್ಮಾಪಕಿ ಶಿಲ್ಪಾ ಗಣೇಶ್ ತಿಳಿಸಿದರು.
ಚಿತ್ರದಲ್ಲಿ ಮೊದಲ ಬಾರಿಗೆ ತಾನು ಒಂದು ಹಾಡಿಗೆ ಧ್ವನಿ ನೀಡಿರುವ ಬಗ್ಗೆ ತಿಳಿಸಿದ ಅವರು, ಸಂಗೀತ ನಿರ್ದೇಶಕರು ಉತ್ತಮವಾಗಿ ಸಂಗಿತ ನೀಡಿರುವುದರಿಂದ ಹಾಡು ಉತ್ತಮವಾಗಿ ಮೂಡಿ ಬಂದಿದೆ. ಅದೇ ರೀತಿ ತುಳು ಚಿತ್ರರಂಗದ ಹಿರಿಯ ಕಲಾವಿದರು ಹಾಗೂ ತಾಂತ್ರಿಕ ತಂಡದ ಸಹಕಾರದಿಂದ ಚಿತ್ರ ತುಂಬಾ ಸೋಗಸಾಗಿ ಮೂಡಿಬಂದಿದೆ, ಜೊತೆಗೆ ತನ್ನ ಪತಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಬೆಂಬಲ ಹಾಗೂ ಪ್ರೋತ್ಸಾಹ ಕೂಡ ಸಿಕ್ಕಿದ್ದರಿಂದ ನನಗೆ ದ್ವಿಭಾಷಾ ಚಿತ್ರ ನಿರ್ಮಿಸಲು ಸಾಧ್ಯವಾಯಿತು. ಪ್ರತಿಯೊಬ್ಬರು ಚಿತ್ರವನ್ನು ಚಿತ್ರ ಮಂದಿರದಲಿಯೇ ನೋಡುವ ಮೂಲಕ ಚಿತ್ರಕ್ಕೆ ಪ್ರೋತ್ಸಾಹ ನೀಡಿ ಸಹಕರಿಸ ಬೇಕು ಎಂದು ಶಿಲ್ಪಾ ಗಣೇಶ್ ಹೇಳಿದರು.
ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಮಾತನಾಡಿ, ಕರಾವಳಿಯ ಜನತೆಯ ಸಹಕಾರ ಹಾಗೂ ತುಳು ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನದಿಂದ ಈ ಚಿತ್ರ ನಿರ್ಮಿಸಿದ್ದು, ಇಲ್ಲಿಯ ಕಲಾವಿದರ ಉತ್ತಮ ಸಹಕಾರದಿಂದ ಇದೆಲ್ಲಾ ಸಾಧ್ಯವಾಯಿತು. ಕುಟುಂಬದ ಎಲ್ಲಾ ವರ್ಗದ ಜನರಿಗೆ ಈ ಚಿತ್ರವು ಇಷ್ಟವಾಗಲಿದ್ದು ಎಲ್ಲರೂ ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕೆಂದು ಹೇಳಿದರು.
ಈ ಚಿತ್ರದಿಂದ ಹಣ ಬರಲಿ, ಬಾರದಿರಲಿ, ಆದರೆ ಇಲ್ಲಿಯ ಕಲಾವಿದರ ಜೊತೆ ಚಿತ್ರ ಮಾಡುವುದು ತುಂಬಾ ಹೆಮ್ಮೆ ಅನಿಸುತ್ತಿದೆ. ಹೊಸ ಪ್ರತಿಭೆಗಳ ಜೊತೆಗೆ ತುಳುನಾಡಿನ ಹಿರಿಯ, ಕಿರಿಯ ಕಲಾವಿದರನ್ನು ಈ ಚಿತ್ರದಲ್ಲಿ ಒಗ್ಗೂಡಿಸಿರುವುದು ತುಂಬಾ ವಿಶೇಷವಾಗಿತ್ತು ಎಂದು ಗಣೇಶ್ ಅವರು ಕಲಾವಿದರ ಹಾಗೂ ಚಿತ್ರ ತಂಡದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಚಿತ್ರ ನಿರ್ದೇಶಕ, ನಿರ್ಮಾಪಕ, ನಟ ದೇವದಾಸ್ ಕಾಪಿಕಾಡ್ ಅವರು ಮಾತನಾಡಿ, ತುಳು ಚಿತ್ರ ಸುವರ್ಣಯುಗ ಮುಗಿಯುವಾಗ ಗೋಲ್ಡನ್ ಸ್ಟಾರ್ ಬಂದಿದ್ದಾರೆ. ಗೋಲ್ಡನ್ ಮೂವೀಸ್ ಬ್ಯಾನರ್‌ನಲ್ಲಿ ತುಳು ಭಾಷೆಯಲ್ಲಿ ಚಿತ್ರ ನಿರ್ಮಾಣವಾಗುತ್ತಿರುವುದು ತುಂಬಾ ಸಂತೋಷದ ವಿಚಾರ. ಗೋಲ್ಡನ್ ಮೂವೀಸ್ ನ ಮೂಲಕ ಇನ್ನೂ ಅನೇಕ ತುಳು ಚಿತ್ರಗಳು ಮೂಡಿ ಬರಲಿ. ತುಳು ಚಿತ್ರರಂಗಕ್ಕೆ ‘ಪಿಕ್ಚರ್’ ಮತ್ತೊಂದು ಉತ್ತಮ ಕೊಡುಗೆಯಾಗಲಿ ಎಂದು ಶುಭಾ ಹಾರೈಸಿದರು.
ಇದು ನಿತ್ಯಪ್ರಕಾಶ್ ಬಂಟ್ವಾಳ್ ಅವರು ನಾಯಕ ನಟನಾಗಿ ನಟಿಸುತ್ತಿರುವ ಮೊದಲ ಸಿನಿಮಾವಾಗಿದ್ದು, ಈ ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಹೊಸ ನಾಯಕ ನಟನ ಪ್ರವೇಶವಾಗಿದೆ. ನಿತ್ಯಪ್ರಕಾಶ್ ಬಂಟ್ವಾಳ್ ಉತ್ತಮ ಅಭಿನಯ ನೀಡಿದ್ದಾರೆ ಎಂದು ಶ್ಲಾಘಿಸಿದರು. .
ಸ್ಯಾಂಡಲ್‌ವುಡ್‌ನಲ್ಲಿ ತುಂಬಾ ಸರಳವಾಗಿ ಕಂಡು ಬರುವ ಇಬ್ಬರು ನಟರಲ್ಲಿ ರಮೇಶ್ ಅರವಿಂದ್ ಬಿಟ್ಟರೆ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಒಬ್ಬ, ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಜೊತೆಗೆ ಇಡೀ ತುಳು ಚಿತ್ರ ರಂಗವನ್ನು ಒಂದೇ ವೇದಿಕೆ ತಂದು ಚಿತ್ರ ತಂಡದ ಅಷ್ಟೂ ಕಲಾವಿದರ ಜೊತೆ ಲವಲವಿಕೆಯಿಂದ ಓಡಾಡಿಕೊಂಡು ತುಳು ಭಾಷೆಗೆ ಭೇದ ಭಾವ ಇಲ್ಲ ಎಂದು ಈ ಚಿತ್ರದ ಮೂಲಕ ತೋರಿಸಿಕೊಟ್ಟ ನಿರ್ಮಾಕಕಿ ಶಿಲ್ಪಾ ಗಣೇಶ್ ಅವರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಕಾಪಿಕಾಡ್ ಮಾಸ್ಟ್ರ್ ಹೇಳಿದರು.
ಚಿತ್ರದ ನಾಯಕ ನಟ ನಿತ್ಯಪ್ರಕಾಶ್ ಬಂಟ್ವಾಳ್ ಅವರು ಮಾತನಾಡಿ, ಈ ಒಂದು ಚಿತ್ರ ತಂಡದ ಜೊತೆ ಕೆಲಸ ಮಾಡಿರುವುದಕ್ಕೆ ತುಂಬಾ ಹೆಮ್ಮೆಯಾಗುತ್ತಿದೆ. ಎಲ್ಲಾ ಅನುಭವಿ ಕಲಾವಿದರ ಜೊತೆ ನಾನು ಒಬ್ಬ ಮಾತ್ರ ಮೊದಲ ಬಾರಿಗೆ ನಟಿಸುತ್ತಿದ್ದೆ. ಆದರೆ ಶಿಲ್ಪಾ ಮೇಡಂ ಹಾಗೂ ಎಲ್ಲಾ ಹಿರಿಯ, ಕಿರಿಯ ಕಲಾವಿದರ ಜೊತೆ ಕೆಲಸ ಮಾಡುವಾಗ ಅವರೆಲ್ಲಾ ಕೊಡುತ್ತಿದ್ದ ಪ್ರೋತ್ಸಾಹದಿಂದ ನನ್ನಲ್ಲಿ ನನಗೆ ಗೊತ್ತಿಲ್ಲದ ಹಾಗೆ ಎನರ್ಜಿ ತುಂಬುತ್ತಿತ್ತು. ಈ ಎಲ್ಲಾ ಕಲಾವಿದರ ಸಹಕಾರದಿಂದ ನಾನು ಈ ಚಿತ್ರದಲ್ಲಿ ಉತ್ತಮ ಅಭಿನಯ ನೀಡಲು ಸಹಾಯವಾಯಿತು. ಎಲ್ಲರೂ ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು. ತಮ್ಮೆಲ್ಲರ ಸಹಕಾರವನ್ನು ಎದುರು ನೋಡುತ್ತೇನೆ ಎಂದು ಹೇಳಿದರು.
ಚಿತ್ರದ ನಾಯಕಿ ನಟಿ ಅಮೃತಾ ಅವರು ಮಾತನಾಡಿ, ಮೊದಲನೆಯಾದಾಗಿ ಈ ಚಿತ್ರದಲ್ಲಿ ನನಗೆ ಅವಕಾಶ ಕೊಟ್ಟ ಶಿಲ್ಪಾ ಮೇಡಂ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ತುಂಬಾ ಮಂದಿಗೆ ಚಿತ್ರರಂಗಕ್ಕೆ ಬರಲು ಆಸಕ್ತಿ ಇರುತ್ತದೆ. ಆದರೆ ಕೆಲವರಿಗೆ ಮಾತ್ರ ಅ ಅವಕಾಶ ಸಿಗುತ್ತದೆ. ಇಲ್ಲಿ ನನಗೆ ಅವಕಾಶ ಗೆ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಇಷ್ಟೊಂದು ದಿಗ್ಗಜರ ಮಧ್ಯೆ ನಾನು ಸಿನಿಮಾ ಮಾಡುತ್ತೇನೆ ಎಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ. ಈ ಹಿಂದೆ ರಾಜ್ ಬಿ ಶೆಟ್ಟಿಯವರು ಅವರ ಒಂದು ಸಿನಿಮಾದಲ್ಲಿ ಅವಕಾಶ ಕೊಟ್ಟಿರುವುದಕ್ಕೆ ಇಂದು ಇಲ್ಲಿಯವರೆಗೆ ಬರುವಂತಾಯಿತು ಎಂದು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.
ಚಿತ್ರದಲ್ಲಿ ನಿತ್ಯಪ್ರಕಾಶ್ ಬಂಟ್ವಾಳ್ ಹಾಗೂ ಅಮೃತಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ದೇವದಾಸ್ ಕಾಪಿಕಾಡ್, ನವೀನ್ ಡಿ.ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್, ಪುಷ್ಪರಾಜ್ ಬೊಳ್ಳಾರ್ ,ಅರ್ಜುನ್ ಕಾಪಿಕಾಡ್, ಉಮೇಶ್ ಮಿಜಾರು ಇನ್ನೂ ಹಲವಾರು ನಟರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಹಾಗೂ ಚಂದ್ರಶೇಖರ್ ಕೆ.ಎಸ್.ಛಾಯಾಗ್ರಹಣ, ಸ್ಯಾಮ್ಯುಯೆಲ್ ಅಬಿ ಸಂಗೀತ ಸಂಯೋಜನೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಿನಿಮಾ ರಂಗದ ಪ್ರಮುಖರಾದ ಭೋಜರಾಜ್ ವಾಮಂಜೂರು, ಅರ್ಜುನ್ ಕಾಪಿಕಾಡ್, ಸ್ಯಾಮ್ಯುಯೆಲ್ ಅಬಿ, ಸಚಿನ್ ಉಪ್ಪಿನಂಗಡಿ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.
_ Sathish Kapikad