
ಮಂಗಳೂರು: ಇಂದು ಮೀಲಾದುನ್ನಬಿ. ಸಂತೋಷ ಮತ್ತು ಸಂಭ್ರಮದ ಈ ಪವಿತ್ರ ದಿನದಂದು ಸಮಸ್ತ ಕನ್ನಡಿಗರಿಗೆ ಮೀಲಾದುನ್ನಬಿಯ ಹಾರ್ದಿಕ ಶುಭಾಶಯಗಳು.
ಪ್ರವಾದಿ ಮುಹಮ್ಮದ್ (ಸ.ಅ) ರವರ ಬದುಕಿನ ಮಹತ್ವದ ಮೌಲ್ಯಗಳಾದ ಕರುಣೆ, ಸಂಯಮ, ಶಿಸ್ತು, ನೆರೆಯವರ ಹಕ್ಕಿನ ಗೌರವ, ದುರ್ಬಲರ ಕಾಳಜಿ ಹಾಗೂ ಸಮಾಜಕ್ಕೆ ಒಳಿತು ಮಾಡುವ ಮನೋಭಾವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ.
ಪ್ರವಾದಿ (ಸ.ಅ) ರವರನ್ನು ಗೌರವಿಸುವ ಅತ್ಯುತ್ತಮ ಮಾರ್ಗ ಅವರ ಮೌಲ್ಯಗಳನ್ನು ನಮ್ಮ ನಡವಳಿಕೆಯಲ್ಲಿ ಪಾಲಿಸುವುದಾಗಿದೆ.
ಈ ದಿನದ ನಮ್ಮ ಆಚರಣೆಗಳು ಜನಸಾಮಾನ್ಯರಿಗೆ ತೊಂದರೆ ಉಂಟುಮಾಡದಿರಲಿ. ರಸ್ತೆಯಲ್ಲಿ ಸಂಚರಿಸುವವರಿಗೆ ಅಡಚಣೆಯಾಗದಿರಲಿ. ವಿದ್ಯಾರ್ಥಿಗಳ ಓದಿಗೆ ಹಾಗೂ ವೃದ್ಧರ ವಿಶ್ರಾಂತಿಗೆ ಭಂಗವಾಗದಂತೆ, ಶಾಂತಿ ಮತ್ತು ಸೌಹಾರ್ದತೆಯಿಂದ ಮೀಲಾದುನ್ನಬಿಯನ್ನು ಆಚರಿಸೋಣ.
ಪ್ರವಾದಿ ಮುಹಮ್ಮದ್ (ಸ.ಅ) ರವರ ಜೀವನ ಸಂದೇಶ ಮತ್ತು ಮಾನವೀಯ ಮೌಲ್ಯಗಳನ್ನು ಜನರಿಗೆ ಪರಿಚಯಿಸುವ ಮೂಲಕ ಪ್ರೀತಿ, ಸಾಮರಸ್ಯ ಮತ್ತು ಭ್ರಾತೃತ್ವದ ಸಮಾಜವನ್ನು ಕಟ್ಟೋಣ.
ನೆಮ್ಮದಿಯ ನಾಡು, ಸೌಹಾರ್ದಯುತ ಕರ್ನಾಟಕ, ಬಲಿಷ್ಠ ದೇಶ — ನಮ್ಮ ಸಂಕಲ್ಪವಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಮೀಲಾದುನ್ನಬಿಯ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಿದ್ದಾರೆ.
_Sathish Kapikad


