ಮಂಗಳೂರು, ಆಗಸ್ಟ್.10: ರೈತ ಕಾರ್ಮಿಕರ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಹಾಗೂ ವಿವಿಧ ಜನವಿಭಾಗಗಳ ಪ್ರಶ್ನೆಗಳ ಆಧಾರದಲ್ಲಿ ಇಂದು(10-08-2026) ದೇಶಾದ್ಯಂತ ಜೈಲ್ ಭರೋ ಚಳುವಳಿ ನಡೆದಿದ್ದು,ಅದರ ಭಾಗವಾಗಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ, ಸಂಯುಕ್ತ ರೈತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನ ಜರುಗಿತು.

ಪ್ರತಿಭಟನಾಕಾರರು ಸಾಮೂಹಿಕ ಬಂಧನಕ್ಕೊಳಗಾಗಿ ಬಳಿಕ ಬಿಡುಗಡೆಗೊಂಡರು.

ಕ್ವಿಟ್ ಇಂಡಿಯಾ ಚಳುವಳಿಯ ನೆನಪಿನಲ್ಲಿ ಜರುಗಿದ ಪ್ರತಿಭಟನಾ ಪ್ರದರ್ಶನವನ್ನುದ್ದೇಶಿಸಿ ಮಾತನಾಡಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, *ಸ್ವಾತಂತ್ರ್ಯ ಚಳುವಳಿಯಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಫಲವಾಗಿ ದೇಶವನ್ನು ಬ್ರಿಟೀಷರಿಂದ ವಿಮೋಚನೆ ಗೊಳಿಸಲಾಯಿತು.

ಅಂದು ಪಡೆದ ಸ್ವಾತಂತ್ರ್ಯವನ್ನು ಇಂದು ಮತ್ತೆ ಅಮೇರಿಕನ್ ಸಾಮ್ರಾಜ್ಯಶಾಹಿಗಳ ಪಾದತಲಕ್ಕೆ ಒಪ್ಪಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸಕಲ ಸಿದ್ದತೆ ನಡೆಸಿದೆ.ಇಡೀ ದೇಶವನ್ನೇ ನಿಯಂತ್ರಿಸುತ್ತಿರುವ ಕಾರ್ಪೊರೇಟ್ ಕಂಪೆನಿಗಳ ವಿರುದ್ಧ ಜನತೆಯ ಆಕ್ರೋಶ ಭುಗಿಲೇಳುತ್ತಿದೆ.ಅಂದು‌ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆ ಮೊಳಗಿದರೆ,ಇಂದು ಕಾರ್ಪೊರೇಟ್ ಗಳೇ ಭಾರತ ಬಿಟ್ಟು ತೊಲಗಿ ಎಂಬಂತಹ ಘೋಷಣೆ ಜನಸಾಮಾನ್ಯರಿಂದ ವ್ಯಕ್ತವಾಗುತ್ತಿದೆ.

ಕಳೆದ ಹಲವು ವರ್ಷಗಳ ಕಾಲ ಕರ್ನಾಟಕ ರಾಜ್ಯದ ಕಾರ್ಮಿಕರಿಗೆ ಕನಿಷ್ಠ ಕೂಲಿ ಪ್ರಕಟಿಸದೆ ಮೋಸ ಮಾಡಿದ ರಾಜ್ಯ ಸರಕಾರ ಈ ವರ್ಷದ ಮೇ – 22 ರಂದು ಕನಿಷ್ಠ ಕೂಲಿ ಪ್ರಕಟಿಸಿದರೂ, ಮಾಲಕರ ಪ್ರಬಲ ಒತ್ತಡಕ್ಕೆ ಮಣಿದು ಮತ್ತೆ ಮರುಪರಿಶೀಲನೆ ಮಾಡುವುದಾಗಿ ಹಾಗೂ ತಡೆ ಹಿಡಿಯುವಂತಹ ಅತ್ಯಂತ ಹೀನ ಕೃತ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿರುವುದು ಕೋಟ್ಯಾಂತರ ಸಂಖ್ಯೆಯ ಕಾರ್ಮಿಕರಿಗೆ ಎಸಗಿದ ಮಹಾದ್ರೋಹವಾಗಿದೆ* ಎಂದು ಹೇಳಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರಾದ ಕೆ ಯಾದವ ಶೆಟ್ಟಿಯವರು ಮಾತನಾಡಿ, *ದೇಶದ ಜನತೆಗೆ ಅನ್ನ ನೀಡುವ ಅನ್ನದಾತರಿಂದಲೇ ಬಲವಂತದ ಹಾಗೂ ಅನ್ಯಾಯದ ಭೂ ಸ್ವಾಧೀನ ನಡೆಸಿ ಕಾರ್ಪೊರೇಟ್ ಕಂಪನಿಗಳ ಒಡೆತನಕ್ಕೆ ನೀಡುವ ನರೇಂದ್ರ ಮೋದಿ ಸರಕಾರ ರೈತ ವಿರೋಧಿಯಾಗಿದೆ.ಈ ಹಿಂದಿನ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ವಿಬಿ ಗ್ರಾಮ್ ಜಿ ಎಂದು ಬದಲಾಯಿಸಿರುವುದಲ್ಲದೆ ಇಡೀ ಯೋಜನೆಯನ್ನು ಕತ್ತು ಹಿಸುಕಿ ಸಾಯಿಸಲು ಹೊರಟಿದೆ* ಎಂದು ಆಕ್ರೋಶ ವ್ಯಕ್ತಪಡಿಸಿದರು

CITU ದ.ಕ.ಜಿಲ್ಲಾ ಅಧ್ಯಕ್ಷರಾದ ಬಿ‌ ಎಂ ಭಟ್ ರವರು ಮಾತನಾಡಿ, *ರಕ್ಷಣೆಯ ಹೆಸರಿನಲ್ಲಿ ಭಕ್ಷಣೆ ಮಾಡುವ ಕೇಂದ್ರ ಸರಕಾರವನ್ನು ಒಂದು ಹೆಜ್ಜೆಗೂ ನಂಬುವಂತಿಲ್ಲ. ದೇಶವನ್ನು ರಕ್ಷಣೆ ಮಾಡುವುದಾಗಿ ಹೇಳಿದ ಇದೇ ಸರಕಾರ ದೇಶದ ಎಲ್ಲಾ ಸಂಪತ್ತನ್ನು ಮಾರಿಬಿಟ್ಟಿದೆ. ಮಹಿಳೆಯರ ರಕ್ಷಣೆ ಮಾಡುವುದಾಗಿ ಹೇಳಿ, ದೇಶದೆಲ್ಲೆಡೆ ಮಹಿಳೆಯರ ಮೇಲಿನ ದೌರ್ಜನ್ಯ ಅತ್ಯಾಚಾರ ಕೊಲೆಗಳು ವಿಪರೀತವಾಗಿ ಹೆಚ್ಚುತಿದೆ. ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾಗಬೇಕಾಗಿದ್ದ ಸರಕಾರ ಅದೇ ವಿದ್ಯಾರ್ಥಿಗಳ ಮೇಲೆ ಅತ್ಯಂತ ಕ್ರೂರವಾಗಿ ವರ್ತಿಸಿದೆ.ಒಟ್ಟಿನಲ್ಲಿ ಕೇಂದ್ರ ಸರಕಾರ ಫ್ಯಾಸಿಸ್ಟ್ ಧೋರಣೆ ಅನುಸರಿಸುತ್ತಿದ್ದು,ದೇಶದ ಸ್ವಾತಂತ್ರ್ಯ ಪ್ರಜಾಪ್ರಭುತ್ವ ಸಾರ್ವಭೌಮತ್ವವನ್ನೇ ಹರಣ ಮಾಡುತ್ತಿದೆ* ಎಂದು ಹೇಳಿದರು

_ಪ್ರತಿಭಟನೆಯಲ್ಲಿ CITU ಜಿಲ್ಲಾ ನಾಯಕರಾದ ಜೆ ಬಾಲಕೃಷ್ಣ ಶೆಟ್ಟಿ,ವಸಂತ ಆಚಾರಿ, ಪದ್ಮಾವತಿ ಶೆಟ್ಟಿ,ಜಯಂತ ನಾಯಕ್, ರಮಣಿ ಮೂಡಬಿದ್ರೆ,ರಾಧಾ ಪುತ್ತಿಗೆ,ರವಿಚಂದ್ರ ಕೊಂಚಾಡಿ, ವಸಂತಿ ಕುಪ್ಪೆಪದವು, ನೊಣಯ್ಯ ಗೌಡ,ಗಿರಿಜಾ, ಭವ್ಯಾ,ಜಯಂತಿ ಶೆಟ್ಟಿ,ಲೋಲಾಕ್ಷಿ, ರೋಹಿದಾಸ್, ಕುಸುಮ, ಜಯಶ್ರೀ, ಜನಾರ್ಧನ ಕುತ್ತಾರ್, ಮುಝಾಫರ್, ಸಂತೋಷ್ ಆರ್ ಎಸ್, ಶೈಲೇಶ್ , ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ರಾದ ಕೃಷ್ಣಪ್ಪ ಸಾಲ್ಯಾನ್, ಸದಾಶಿವದಾಸ್, ಶೇಖರ್ ಕುಂದರ್,ಬಾಬು ಸಾಲ್ಯಾನ್, DYFI ನಾಯಕರಾದ ಸಂತೋಷ್ ಬಜಾಲ್,ಜನವಾದಿ ಮಹಿಳಾ ಸಂಘಟನೆಯ ಕಿರಣಪ್ರಭಾ,ಪ್ರಮೀಳಾ, ಭಾರತಿ,ಜಯಲಕ್ಷ್ಮಿ, ಪ್ರಮೋದಿನಿ,ಲಕ್ಷ್ಮೀ ಮೂಡಬಿದಿರೆ,ವಿಮಾ ನೌಕರರ ಸಂಘದ ಬಿ ಎನ್ ದೇವಾಡಿಗ, ದಲಿತ ಹಕ್ಕುಗಳ ಸಮಿತಿ ಕೃಷ್ಣ ತಣ್ಣೀರು ಬಾವಿ,ರಾಧಾಕೃಷ್ಣ ಬೊಂಡಂತಿಲ, ಆದಿವಾಸಿ ಹಕ್ಕುಗಳ ಸಮಿತಿಯ ಕೃಷ್ಣ ಇನ್ನಾ,ಶೇಖರ್ ವಾಮಂಜೂರು, ದಿನೇಶ್,ಗೀತಾ ಮುಲ್ಕಿ, ವಕೀಲರ ಸಂಘದ ಮನೋಜ್ ವಾಮಂಜೂರು ಮುಂತಾದವರು ಉಪಸ್ಥಿತರಿದ್ದರು.

_ಪ್ರತಿಭಟನಾ ಸಭೆ ಮುಗಿದ ಬಳಿಕ ಪ್ರತಿಭಟನಾಕಾರರು ರಸ್ತೆತಡೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದಾಗ ಪೊಲೀಸರು ಮಧ್ಯೆ ಪ್ರವೇಶಿಸಿ 280ಕ್ಕೂ ಮಿಕ್ಕಿದ ಪ್ರತಿಭಟನಾ ಕಾರರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

_Sathish Kapikad

Share.
Leave A Reply

Exit mobile version