ಮಂಗಳೂರು , ಆ. 8 : ಕುದುರೆಮುಖ ಶ್ರಮಶಕ್ತಿ ಸಂಘಟನೆಯ 40ಕ್ಕೂ ಹೆಚ್ಚು ಕಾರ್ಮಿಕರ ನಿಯೋಗವು ಕೇಂದ್ರ ಉಕ್ಕು ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಕೆ ಐ ಒ ಸಿ ಎಲ್ ಕಂಪನಿಯ ಭವಿಷ್ಯದ ಹಿತದೃಷ್ಟಿಯಿಂದ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಮನವಿ ಸಲ್ಲಿಸಿತು.

ಮುಖ್ಯವಾಗಿ ಕೆ ಐ ಒ ಸಿ ಎಲ್ ಅನ್ನು ಎನ್ ಎಂ ಡಿ ಸಿ ಯೊಂದಿಗೆ ವಿಲೀನಗೊಳಿಸಬೇಕು, ಕಾರ್ಮಿಕರ ವೇತನ ಪರಿಷ್ಕರಣೆ ಮಾಡಬೇಕು ಹಾಗೂ ವಿವಿಧ ಕಾರಣಗಳಿಂದ ಅನ್ಯ ರಾಜ್ಯಗಳಿಗೆ ವರ್ಗಾವಣೆಗೊಂಡಿರುವ ಕಾರ್ಮಿಕರನ್ನು ಮರಳಿ ಕರೆಸಿಕೊಳ್ಳಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಸಚಿವರ ಗಮನಕ್ಕೆ ತರಲಾಯಿತು.

ಕಾರ್ಮಿಕರ ಬೇಡಿಕೆಗಳನ್ನು ಆಲಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ಕಂಪನಿಯ ಉಳಿವು ಹಾಗೂ ಅಭಿವೃದ್ಧಿಗಾಗಿ ಅಗತ್ಯವಾದ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಕೆ. ರಾಜೇಂದ್ರನ್, ಸಂಘಟನೆಯ ಅಸಿಸ್ಟೆಂಟ್ ಜನರಲ್ ಸೆಕ್ರೆಟರಿ ರಾಜ್ ಗುರು, ಚನ್ನಕೇಶವ, ಬಾಲಕೃಷ್ಣ, ಸಂಜೀವ, ಪ್ರಶಾಂತ್, ಶಿವರಾಜ್,ಮೊಕಾ ಬಸವರಾಜ, ಮುನಿರಾಜು ಸೇರಿದಂತೆ ಸಂಘಟನೆಯ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಗೌರವ ಸಲಹೆಗಾರರು ಹಾಗೂ ಸಕ್ರಿಯ ಸದಸ್ಯರು ಉಪಸ್ಥಿತರಿದ್ದರು.

ಕಂಪನಿ ಉಳಿವು, ಕಾರ್ಮಿಕರ ಹಕ್ಕುಗಳ ರಕ್ಷಣೆ ಮತ್ತು ಕಂಪನಿಯ ಪುನಶ್ಚೇತನಕ್ಕಾಗಿ ಸಂಘಟನೆಯ ಹೋರಾಟ ಮುಂದುವರಿಯಲಿದೆ ಎಂದು ಸಂಘಟನೆ ತಿಳಿಸಿದೆ.

_Sathish Kapikad

Share.
Leave A Reply

Exit mobile version