
ಮಂಗಳೂರು, ಆಗಸ್ಟ್. 06: ಆ.8 ಮತ್ತು 9ರಂದು ವಾಮಂಜೂರಿನ ಪಿಲಿಕುಳ ಸಮೀಪದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಎರಡು ದಿನಗಳ ಎಂಎಸ್‌ಎಲ್ ಪ್ರೊ ಎಕ್ಸ್‌ಪೋ–2026 ನಡೆಯಲಿದೆ.
ಈ ಬಗ್ಗೆ ಮಂಗಳೂರಿನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿ ಡಿಜೆ ಶ್ಯಾಮ್ (ಮ್ಯಾಕ್ಸ್ ಪ್ರೊ ಇವೆಂಟ್ಸ್) ಅವರು, ಎಂಎಸ್‌ಎಲ್ ಪ್ರೊ ಎಕ್ಸ್‌ಪೋ ಅಸೋಸಿಯೇಷನ್ ವತಿಯಿಂದ ನಾಲ್ಕನೇ ವರ್ಷದ ಎಂಎಸ್‌ಎಲ್ ಪ್ರೊ ಎಕ್ಸ್‌ಪೋ–2026 ಅನ್ನು ಆ.8 ಮತ್ತು 9ರಂದು ವಾಮಂಜೂರಿನ ಪಿಲಿಕುಳ ಸಮೀಪದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಎರಡು ದಿನಗಳ ಎಕ್ಸ್‌ಪೋ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದ್ದು, ಆಗಸ್ಟ್ 8ರಂದು ಬೆಳಿಗ್ಗೆ 9 ಗಂಟೆಗೆ ಆಳ್ವಾಸ್ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಡಾ. ಮೋಹನ್ ಆಳ್ವ ಉದ್ಘಾಟಿಸಲಿದ್ದು, ಮಧುಬನ್ ಗ್ರಾಫಿಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಧ್ವನಿ, ಬೆಳಕು ಹಾಗೂ ಕಾರ್ಯಕ್ರಮ ನಿರ್ವಹಣಾ ಕ್ಷೇತ್ರದ ಇತ್ತೀಚಿನ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶದಿಂದ ಎಕ್ಸ್‌ಪೋ ಆಯೋಜಿಸಲಾಗಿದೆ ಎಂದು ನಿತ್ಯಾನಂದ ಅವರು ವಿವರ ನೀಡಿದರು.
ಈ ಬಾರಿಯ ಎಕ್ಸ್‌ಪೋದಲ್ಲಿ ಮೂಡುಬಿದಿರೆಯ ಲೆಕ್ಸಾ ಲೈಟಿಂಗ್ಸ್ ಡೈಮಂಡ್ ಸ್ಟಾಲ್ ಪಾಲುದಾರರಾಗಿದ್ದು, ಮಂಗಳೂರಿನ ಎಫ್‌ಟಿಆರ್ ಸೌಂಡ್ ಟ್ರ್ಯಾಕ್ ಗೋಲ್ಡನ್ ಪಾಲುದಾರರಾಗಿ ಹಾಗೂ ಕೇರಳದ ಕೋಝಿಕೋಡ್‌ನ ಸೌಂಡ್ ಲ್ಯಾಂಡ್ ಬೆಂಬಲ ನೀಡುತ್ತಿದೆ. ಹರ್ಮನ್, ಜೆಬಿಎಲ್, ಯಮಹಾ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳ ಸ್ಟಾಲ್‌ಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ ಎಂದು ಅವರು ಹೇಳಿದರು.
ಮುಂಬೈ, ಚೆನ್ನೈ, ಬೆಂಗಳೂರು, ಹುಬ್ಬಳ್ಳಿ, ಹೈದರಾಬಾದ್, ಕೋಝಿಕೋಡ್, ಛತ್ತೀಸ್‌ಗಢ ಹಾಗೂ ಮಂಗಳೂರಿನ ಪ್ರದರ್ಶಕರು ಎಕ್ಸ್‌ಪೋದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವರ್ಷದ ಪ್ರಮುಖ ಆಕರ್ಷಣೆಯಾಗಿ ತೆರೆದ ಗಾಳಿಯಲ್ಲಿ ಲೈನ್ ಅರೇ ಸೌಂಡ್ ಡೆಮೊ, ಅತ್ಯಾಧುನಿಕ ಧ್ವನಿ ಮತ್ತು ಬೆಳಕು ಉಪಕರಣಗಳ ಪ್ರದರ್ಶನ ಆಯೋಜಿಸಲಾಗಿದೆ. ಎಕ್ಸ್‌ಪೋದಲ್ಲಿ ವಿವಿಧ ಉತ್ಪನ್ನಗಳನ್ನು ವಿಶೇಷ ರಿಯಾಯಿತಿ ಹಾಗೂ ಆಕರ್ಷಕ ಕೊಡುಗೆ ದರದಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ
ಕಾರ್ಯಕ್ರಮದಲ್ಲಿ ಕ್ಷೇತ್ರದ ವೃತ್ತಿಪರರು, ಉದ್ಯಮಿಗಳು, ತಂತ್ರಜ್ಞಾನ ಪರಿಣಿತರು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದ್ದು, ನೂತನ ತಂತ್ರಜ್ಞಾನಗಳ ಪ್ರದರ್ಶನ ಮತ್ತು ಮಾಹಿತಿ ವಿನಿಮಯಕ್ಕೆ ವೇದಿಕೆಯಾಗಲಿದೆ. ಈ ಎಕ್ಸ್‌ಪೋಗೆ ಸಾರ್ವಜನಿಕರಿಗೆ ಸಂಪೂರ್ಣ ಉಚಿತ ಪ್ರವೇಶವಿದೆ ಎಂದವರು ತಿಳಿಸಿದರು.
ಅಸೋಸಿಯೇಷನ್‌ನ ಪ್ರಮುಖರಾದ ಕೆ. ನಿತ್ಯಾನಂದ, ಪೈ ಸೌಂಡ್ಸ್‌ನ ವಿ.ವಿ. ಪೈ, ದೇವ್ ಸೌಂಡ್ಸ್‌ನ ಮೋಹನ್, ಎಲ್.ಎಂ. ಎಲೆಕ್ಟ್ರಿಕಲ್ಸ್‌ನ ಎಲ್.ಎಂ. ಮಹೇಶ್, ದಿವ್ಯ ಜ್ಯೋತಿ ಇಲೆಕ್ಟ್ರಿಕ್ಸ್ ನ ರಂಜಾನ್ ಬಿಜೈ, ಡಿಸಿಲ್ವಾ ಸೌಂಡ್ಸ್‌ನ ಡಿಜೆ ಸ್ಯಾಮ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
_Sathish Kapikad


