ಮಂಗಳೂರು, ಏಪ್ರಿಲ್.09 : ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಇದೇ ಏಪ್ರಿಲ್ 12, ಭಾನುವಾರ ಬೆಳಿಗ್ಗೆ 9 ಗಂಟೆಗೆ ಮಂಗಳೂರಿನ ಪುರಭವನದಲ್ಲಿ (ಟೌನ್ ಹಾಲ್) ಬಹಿರಂಗ ಅಧಿವೇಶನ ನಡೆಯಲಿದ್ದು, ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಮಾಲಾಡಿ ಅಜಿತ್ ಕುಮಾರ್ ರೈ ಕೊಡಿಯಾಲ್ ಗುತ್ತು ಅವರು ತಿಳಿಸಿದರು.

ನಗರದ ಬಂಟ್ಸ್ ಹಾಸ್ಟೇಲ್ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಐಕ್ಯತೆ ಮತ್ತು ಸಾಧಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಬೃಹತ್ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ಮಾನ್ಯ ನ್ಯಾಯಮೂರ್ತಿಗಳಾದ ವಿಶ್ವಜಿತ್ ಶೆಟ್ಟಿ ಸವಣೂರು ಹಾಗೂ ರಾಜೇಶ್ ರೈ ಕಲ್ಲಂಗಳ ಅವರು ಭಾಗವಹಿಸಲಿದ್ದಾರೆ. ಕೊಡ್ಮಾನ್ ಮೋಹನದೇವ್ ಆಳ್ವ ಮತ್ತು ಡಾ. ಎಮ್. ಕೆ. ಶೈಲಜಾ ಆಳ್ವ ಅವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ವಿವರಿಸಿದರು.

ಡಾ. ಕೊಡ್ಮಾನ್ ನಾಗಪ್ಪ ಆಳ್ವ ಮತ್ತು ಶ್ರೀಮತಿ ಕಲ್ಯಾಣಿ ಆಳ್ವ ಇವರ ಸ್ಮರಣಾರ್ಥವಾಗಿ ನೀಡುವ ಪ್ರತಿಷ್ಠಿತ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ವೈದ್ಯಕೀಯ ಕ್ಷೇತ್ರದಲ್ಲಿ ನಿಟ್ಟೆ ವಿ.ವಿ.ಯ ಉಪಾಧ್ಯಕ್ಷ ಡಾ. ಸತೀಶ್ ಭಂಡಾರಿ, ಶೈಕ್ಷಣಿಕ ಕ್ಷೇತ್ರದಲ್ಲಿ ಬೆಂಗಳೂರು ಪಶು ವೈದ್ಯಕೀಯ ವಿ.ವಿ.ಯ ಮಾಜಿ ಡೀನ್ ಪ್ರೊ. ವಸಂತ್ ಶೆಟ್ಟಿ ಮುಳ್ಳಾಡ್, ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯ ಸಾಹಿತಿ ಕೆ. ಉಷಾ ಪಿ. ರೈ, ಸಂಗೀತ ಕ್ಷೇತ್ರದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಶೆಟ್ಟಿ, ನೃತ್ಯ ಕ್ಷೇತ್ರದಲ್ಲಿ ಕರ್ನಾಟಕ ಕಲಾಶ್ರೀ ಪುರಸ್ಕೃತ ವಿದುಷಿ ನಯನ ವಿ. ರೈ ಕುಧ್ಕಾಡಿ, ದೇಶ ಸೇವೆ ವಿಭಾಗದಲ್ಲಿ ನಿವೃತ್ತ ಸೇನಾಧಿಕಾರಿ ಲೆ. ಕ. ಅಜಿತ್ ಕುಮಾರ್ ಶೆಟ್ಟಿ, ಕ್ರೀಡಾ ಕ್ಷೇತ್ರದಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ಕಬಡ್ಡಿ ಆಟಗಾರ ಪ್ರಶಾಂತ್ ರೈ ಪುತ್ತೂರು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಈಜುಪಟು ಚಿಂತನ್ ಎಸ್. ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕೈಗಾರಿಕಾ ಕ್ಷೇತ್ರದಲ್ಲಿ ಮುಂಬೈನ ವಿಶ್ವಾಸ್ ಕೆಮಿಕಲ್ಸ್‌ನ ಆಡಳಿತ ನಿರ್ದೇಶಕ ವಿವೇಕ್ ಶೆಟ್ಟಿ ಬೊಳ್ಯಗುತ್ತು ಹಾಗೂ ಕೈಗಾರಿಕೋದ್ಯಮಿ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು ಅವರನ್ನು ಗೌರವಿಸಲಾಗುವುದು.

ಸಾಂಸ್ಕೃತಿಕ ಕ್ಷೇತ್ರಕ್ಕೆ ಮುಂಬೈನ ಚಿಣ್ಣರ ಬಿಂಬದ ಸ್ಥಾಪಕ ಪ್ರಕಾಶ್ ಭಂಡಾರಿ, ಧಾರ್ಮಿಕ ಕ್ಷೇತ್ರಕ್ಕೆ ಕುಂಬ್ಳೆಯ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಶ್ರೀ ಕೆ. ಕೆ. ಶೆಟ್ಟಿ ಕುತ್ತಿಕಾರ್ ಹಾಗೂ ಸಹಕಾರಿ ಕ್ಷೇತ್ರಕ್ಕೆ ಉಡುಪಿಯ ಸಹಕಾರಿ ಧುರೀಣ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಆಯ್ಕೆಯಾಗಿದ್ದಾರೆ ಎಂದರು.

ಅದೇ ರೀತಿ ಆತಿಥ್ಯ ಉದ್ಯಮದಲ್ಲಿ ಥಾಣೆಯ ವೇಣುಗೋಪಾಲ ಎಲ್. ಶೆಟ್ಟಿ, ನಿರ್ಮಾಣ ಕ್ಷೇತ್ರದಲ್ಲಿ ಮಂಗಳೂರಿನ ಮುಗ್ರೋಡಿ ಸುಧಾಕರ ಶೆಟ್ಟಿ, ಸಂಶೋಧನೆಯಲ್ಲಿ ಶ್ರೀನಿವಾಸ್ ವಿ.ವಿ.ಯ ಸಿ.ಇ.ಒ ಡಾ. ನವೀನ್‌ಚಂದ್ರ ಶೆಟ್ಟಿ, ದೈವಾರಾಧನೆಯಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ. ಅಶೋಕ್ ಆಳ್ವ ಮತ್ತು ಸಮಾಜ ಸೇವೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕುಂದಾಪುರದ ಕೆಂಚನೂರು ಸೋಮಶೇಖರ ಶೆಟ್ಟಿ ಸನ್ಮಾನಿತರಾಗಲಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಮ್ಯಾಪ್ಸ್ ಸಂಸ್ಥೆಯ ಅಧ್ಯಕ್ಷ ದಿನೇಶ್ ಆಳ್ವ, ಕೃಷಿಯಲ್ಲಿ ಸಿರಿಕುರಲ್ ಸಂಸ್ಥೆಯ ಮುರ ಸದಾಶಿವ ಶೆಟ್ಟಿ ಎಕ್ಕಾರು, ಕೃಷಿ ಸಂಶೋಧನೆಯಲ್ಲಿ ಕಾಸರಗೋಡಿನ ಕೃಷಿ ವಿಜ್ಞಾನ ಕೇಂದ್ರದ ತಜ್ಞೆ ಡಾ. ಸರಿತಾ ಹೆಗ್ಡೆ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ಬೆಂಗಳೂರಿನ ತೇಜಾ ಇಕ್ವಿಪ್‌ಮೆಂಟ್ಸ್‌ನ ರವೀಂದ್ರನಾಥ ಮಾರ್ಲ ಅವರಿಗೆ ಗೌರವ ಸಲ್ಲಿಸಲಾಗುವುದು.

ಕಲಾ ಕ್ಷೇತ್ರದಲ್ಲಿನ ಗಣನೀಯ ಸಾಧನೆಗಾಗಿ ಉಡುಪಿಯ ಯಕ್ಷಗಾನ ಮೇಳಗಳ ಸಂಚಾಲಕ ಪಿ. ಕಿಶನ್ ಹೆಗ್ಡೆ ಅವರಿಗೆ ಕೊಡಿಯಾಲ್‌ಗುತ್ತು ಭಾಸ್ಕರ ರೈ ಸ್ಮರಣಾರ್ಥ ಸನ್ಮಾನ ಮಾಡಲಾಗುವುದು ಎಂದು ಅಜಿತ್‌ ಕುಮಾರ್‌ ಮಾಲಾಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಹೇಮನಾಥ ಶೆಟ್ಟಿ ಕಾವು, ಪ್ರಧಾನ ಕಾರ್ಯದರ್ಶಿ ಕೆ. ಎಮ್. ಶೆಟ್ಟಿ ಹಾಗೂ ಕೋಶಾಧಿಕಾರಿ ಸಿ.ಎ. ರಾಮ್ ಮೋಹನ್ ರೈ ಉಪಸ್ಥಿತರಿದ್ದರು.

_Sathish Kapikad 

Share.
Leave A Reply

Exit mobile version