
ಮಂಗಳೂರು: ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬೇಕಾಗಿ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಅವರು ಬೀದಿ ನಾಟಕ ಮಾಡ್ತಿದ್ದಾರೆ. ಆದರೆ ಮಂಗಳೂರಿನ ಜನರು ಅಷ್ಟು ಮೂರ್ಖರಲ್ಲ. 2019ರಿಂದ 2025ರವರೆಗೆ ಆಡಳಿತ ಇದ್ದದ್ದು ಬಿಜೆಪಿ ಕೈಯಲ್ಲಿ. ದಕ್ಷಿಣ ಕ್ಷೇತ್ರದಲ್ಲಿ 8 ವರ್ಷಗಳಿಂದ ಇವರೇ ಶಾಸಕರು. ಇವರದ್ದೇ ಸರಕಾರ ಆಡಳಿತದಲ್ಲೂ ಇತ್ತು. ಎಲ್ಲವೂ ಇವರ ಕೈಯಲ್ಲೇ ಇದ್ದಾಗ ಮಂಗಳೂರು ನಗರದ ರಸ್ತೆಗಳನ್ನು ಯಾಕೆ ಅಭಿವೃದ್ಧಿ ಪಡಿಸಿಲ್ಲ? ಶಾಸಕರು ಅವರ ಕಾಲದಲ್ಲಿ ಮಾಡಿರುವ ಅಭಿವೃದ್ಧಿ ಏನು? ಅವರನ್ನು ಆರಿಸಿ ಕಳಿಸಿದ ಜನರ ಸೇವೆಯನ್ನು ಮಾಡಿದ್ದರೆ ಇಂದು ಈ ಬೀದಿ ನಾಟಕ ಮಾಡುವ ಪ್ರಮೇಯ ಬರ್ತಾ ಇರಲಿಲ್ಲ“ ಎಂದು ಕೆಪಿಸಿಸಿ ವಕ್ತಾರ ಎಸಿ ವಿನಯರಾಜ್ ಪತ್ರಿಕಾಗೋಷ್ಟಿಯಲ್ಲಿ ಪ್ರಶ್ನಿಸಿದರು.
ಕದ್ರಿ ಶಿವಭಾಗ್ ವಾರ್ಡ್ ನಲ್ಲಿ ಇವರದ್ದೇ ಪಕ್ಷದ ಕಾವ್ಯ ನಟರಾಜ್ ಕಾರ್ಪೊರೇಟರ್ ಆಗಿದ್ದರು. ಆಗ ಯಾಕೆ ಮಾತಾಡಿಲ್ಲ? ಈಗ ಯಾಕೆ ನಾಟಕ ಮಾಡ್ತಾ ಇದ್ದೀರಿ ಶಾಸಕರೇ?
ಮೂರುವರೆ ವರ್ಷಗಳಲ್ಲಿ ಬಿಡುಗಡೆಯಾದ ಅನುದಾನ ಎಷ್ಟು? ಸಿದ್ದರಾಮಯ್ಯರು ಮುಖ್ಯಮಂತ್ರಿಯಾಗಿದ್ದಾಗ 145 ಕೋಟಿ ಹಣ ಮಂಗಳೂರು ಮಹಾನಗರ ಪಾಲಿಕೆಗೆ ಬಂದಿದೆ ,
ಪ್ರತೀ ಶಾಸಕರಿಗೆ 25 ಕೋಟಿ ಅನುದಾನ, ನೈಸರ್ಗಿಕ ವಿಕೋಪದಡಿಯಲ್ಲಿ 15 ಕೋಟಿ, 15ನೇ ಹಣಕಾಸು ಆಯೋಗದಡಿ 10 ಕೋಟಿ ಅನುದಾನ ಬಂದಿದೆ, ರಾಜ್ಯ ಹಣಕಾಸು ಆಯೋಗ 5 ಕೋಟಿ ನೀಡಿದೆ. ಮೊನ್ನೆ ಮಂಗಳೂರಲ್ಲಿ ನಡೆದ ಸಂಪುಟ ಸಭೆಯಲ್ಲಿ ಡಿಕೆ ಶಿವಕುಮಾರ್ ಅವರು 400 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಅದರಲ್ಲಿ ಬಹುಪಾಲು ಟೆಂಡರ್ ಮುಗಿದು ಕಾಮಗಾರಿ ಹಂತದಲ್ಲಿದೆ.
ವೇದವ್ಯಾಸ್ ಕಾಮತ್ ಅವರೇ ಇಷ್ಟು ಕೋಟಿ ಹಣದಲ್ಲಿ ನಿಮಗ್ಯಾಕೆ ರಸ್ತೆ ಅಭಿವೃದ್ಧಿ ಮಾಡಲು ಆಗಲಿಲ್ಲ? ಶಾಸಕರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಲೆಯಿದೆ ಹೀಗಾಗಿ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ಭಯದಿಂದ ಈ ರೀತಿ ಹಾದಿ ಬೀದಿಯಲ್ಲಿ ಪ್ರಹಸನ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕರೇ ನೀವು ಮಂಗಳೂರಿಗೆ ಎಷ್ಟು ಅನುದಾನ ತಂದಿದ್ದೀರಿ ಎಂದು ಮಂಗಳೂರಿನ ಜನರಿಗೆ ಶ್ವೇತಪತ್ರ ಹೊರಡಿಸಿ. ನಾವು ನೇರಾನೇರ ಚರ್ಚೆಗೆ ತಯಾರಿದ್ದೇವೆ. ನಿಮ್ಮ ವೈಫಲ್ಯ ಮುಚ್ಚಿಹಾಕಲು ನಾಟಕ ಮಾಡಬೇಡಿ ಅದನ್ನು ಬಂದ್ ಮಾಡಿ. ಅಭಿವೃದ್ಧಿ ಕಾರ್ಯಗಳು ಆಗುವಾಗ ಕಾರ್ಯಕ್ರಮದಲ್ಲಿ ನೀವೇ ಅಧ್ಯಕ್ಷ ಸ್ಥಾನವನ್ನು ವಹಿಸುತ್ತೀರಿ ಹೀಗಿರುವಾಗ ನಿಮಗ್ಯಾಕೆ ವಾಸ್ತವ ಸ್ಥಿತಿ ತಿಳಿದಿಲ್ಲ?
ಮಂಗಳೂರು ದಸರಾ ನಡೆಯುವಾಗ ಜನರು ಜಾತಿ ಮತ ಬೇಧ ಮರೆತು ಪಾಲ್ಗೊಳ್ಳುತ್ತಾರೆ. ದಸರಾ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಇಡೀ ನಗರ ನೈರ್ಮಲ್ಯ, ವಿದ್ಯುದ್ದೀಪ ನಿಮ್ಮ ಕೊಡುಗೆಯಲ್ಲ. ಎಲ್ಲ ಪಕ್ಷಗಳ ಒಕ್ಕೊರಳ ಒತ್ತಾಯದಿಂದ ಇದು ನಡೆಯುತ್ತದೆ ನೀವು ಇನ್ನು ಮುಂದೆ ಎಲ್ಲೂ ಇದು ನನ್ನ ಸಾಧನೆ ಎಂದು ಹೇಳಿಕೊಂಡು ಓಡಾಡಬೇಡಿ. ಮಹಾನಗರ ಪಾಲಿಕೆಗೆ ಕಾಂಗ್ರೆಸ್ ಅನುದಾನ ಬಿಡುಗಡೆ ಮಾಡಲು ಯಾವುದೇ ಹಿಂಜರಿಕೆ ಮಾಡುತ್ತಿಲ್ಲ ಎಂದರು.
645 ಕೋಟಿಯ ಕಾಮಗಾರಿ ಘೋಷಣೆಯಾಗಿದೆ. ಟೆಂಡರ್ ಪ್ರಕ್ರಿಯೆ ನಡೆದು ಕಾಮಗಾರಿ ಹಂತದಲ್ಲಿದೆ ಹೀಗಿರುವಾಗ ಯಾವ ಆಧಾರದಲ್ಲಿ ಮಹಾನಗರ ಪಾಲಿಕೆಗೆ ಅನುದಾನ ಬರುತ್ತಿಲ್ಲ ಎನ್ನುತ್ತೀರಿ ಎಂದು ಕಿಡಿಕಾರಿದರು.
ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ಪ್ರಮುಖರಾದ ಪ್ರಕಾಶ್ ಸಾಲಿಯಾನ್, ಸಲೀಮ್, ಅಪ್ಪಿ, ಸಂಶುದ್ದಿನ್, ಅನಿಲ್ ಪೂಜಾರಿ, ಸವಿತಾ ಮಿಸ್ಕಿತ್, ಅಶ್ರಫ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.
_Sathish Kapikad