ಮಂಗಳೂರು:ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಪ್ರಾಯೋಜಿಸಲಾಗುವ 2026-27ನೇ ಸಾಲಿನ ಪ್ರತಿಷ್ಠಿತ ರಾಜ್ಯಮಟ್ಟದ ‘ವಂದನಾ ಪ್ರಶಸ್ತಿ’ಗೆ ಕ್ರೀಡಾಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಎಂ.ಆರ್. ಪೂವಮ್ಮ ಆಯ್ಕೆಯಾಗಿದ್ದಾರೆ.

ಅ.30ರಂದು ಸಂಜೆ 7.30ಕ್ಕೆ ನಗರದ ಹೊಟೇಲ್ ಸೀ ವ್ಯೂವ್‌ನ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ರೋ|ಡಾ.ದೇವದಾಸ್ ರೈ ತಿಳಿಸಿದರು.

ಮಂಗಳವಾರ ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡಾಕ್ಷೇತ್ರದಲ್ಲಿ ಎಂ.ಆರ್. ಪೂವಮ್ಮ ಸಲ್ಲಿಸಿರುವ ಸುದೀರ್ಘ ಸೇವೆ, ಅಮೂಲ್ಯ ಕೊಡುಗೆ ಹಾಗೂ ಗಣನೀಯ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಫಲಕ, ಪ್ರಮಾಣಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ತಿಳಿಸಿದರು.

ಮಾಜಿ ಒಲಿಂಪಿಕ್ ಕ್ರೀಡಾಪಟು, ಅರ್ಜುನ ಪ್ರಶಸ್ತಿ ಪುರಸ್ಕೃತೆ ಹಾಗೂ ಪದ್ಮಶ್ರೀ ಪುರಸ್ಕೃತರಾದ ವಂದನಾ ಶಾನುಭಾಗ್ (ಪೈ ಮಾರೂರು) ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ಅಧ್ಯಕ್ಷ ಬಿ.ಎನ್.ರವೀಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ರೋಟರಿ ಜಿಲ್ಲೆ 3181ರ ಸಹಾಯಕ ಗವರ್ನರ್ ಪ್ರವೀಣ್ ಚಂದ್ರ ಶರ್ಮಾ ಹಾಗೂ ವಲಯ ಸೇನಾನಿ ರಾಜೇಶ್ ಶೆಟ್ಟಿ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ಅಧ್ಯಕ್ಷ ರೋ| ಬಿ.ಎನ್.ರವೀಂದ್ರ, ಪ್ರಮುಖರಾದ ರೋ| ಮುಖೇಶ್ ಕರ್ಕೇರ, ರೋ| ಎಂ.ವಿ. ಮಲ್ಯ, ರೋ| ಭಾಸ್ಕರ್ ರೈ ಕಟ್ಟಾ ಸೇರಿದಂತೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

_Sathish Kapikad 

Share.
Leave A Reply

Exit mobile version