
ಮಂಗಳೂರು : ಕೊಂಕಣಿ ಭಾಷೆ, ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ಮಾಂಡ್ ಸೊಭಾಣ್ ಸಂಘಟನೆಯ ವತಿಯಿಂದ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನವನ್ನು ನವೆಂಬರ್ 3ರಿಂದ 15ರವರೆಗೆ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ.ಪಿಂಟೊ ಹೇಳಿದರು.
ಮಂಗಳವಾರ ನಗರದ ಖಾಸಗಿ ಹೊಟೇಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ i ಬಗ್ಗೆ ಮಾಹಿತಿ ನೀಡಿದ ಅವರು, ಮಾಂಡ್ ಸೊಭಾಣ್ ಸಂಸ್ಥೆಯ 40ನೇ ವರ್ಷದ ಮಾಣಿಕ್ಯೋತ್ಸವದ ಅಂಗವಾಗಿ ನಡೆಯಲಿರುವ ಈ ಮಹಾ ಸಮ್ಮೇಳನವು ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ದಿವಂಗತ ಎರಿಕ್ ಒಝೇರಿಯೊ ಅವರಿಗೆ ಗೌರವ ಸಮರ್ಪಿಸುವ ಕಾರ್ಯಕ್ರಮವೂ ಆಗಿದೆ ಎಂದು ತಿಳಿಸಿದರು.
ಸತತ 12 ದಿನ, 12 ಗಂಟೆ ಹಾಗೂ 12 ನಿಮಿಷಗಳ ನಿರಂತರ ಗಾಯನದ ಮೂಲಕ ಗಿನ್ನೆಸ್ ದಾಖಲೆಗೆ ಪ್ರಯತ್ನ :
ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ ನವೆಂಬರ್ 3ರಂದು ಬೆಳಿಗ್ಗೆ 6 ಗಂಟೆಯಿಂದ ಸತತ 12 ದಿನ, 12 ಗಂಟೆ ಹಾಗೂ 12 ನಿಮಿಷಗಳ ಕಾಲ ಸಮೂಹ ಗಾಯನ ನಡೆಸಿ ಗಿನ್ನೆಸ್ ವಿಶ್ವ ದಾಖಲೆಗೆ ಪ್ರಯತ್ನಿಸಲಾಗುತ್ತದೆ. ‘ಕೊಂಕಣಿ ನಿರಂತರಿ – ಸಂಸಾರ್ ಸರಾಸರಿ’ ಎಂಬ ಹೆಸರಿನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಭಾರತ, ಆಸ್ಟ್ರೇಲಿಯಾ, ಕುವೈತ್, ಓಮನ್ ಮತ್ತು ಖತಾರ್ ಸೇರಿದಂತೆ ವಿವಿಧ ದೇಶಗಳ ಕೊಂಕಣಿ ಕಲಾವಿದರು ಪಾಲ್ಗೊಳ್ಳಲಿದ್ದಾರೆ.
ಕ್ರೈಸ್ತ, ಹಿಂದೂ ಮತ್ತು ಮುಸ್ಲಿಂ ಸಮುದಾಯಗಳೂ ಸೇರಿದಂತೆ ವಿವಿಧ ಕೊಂಕಣಿ ಭಾಷಿಕ ಸಮುದಾಯಗಳು ಹಾಗೂ ಇತರ ಭಾಷಿಕರು ಈ ಸಂಗೀತ ಅಭಿಯಾನದಲ್ಲಿ ಕೈಜೋಡಿಸಲಿದ್ದಾರೆ. 300 ತಂಡಗಳ ಮೂಲಕ 6,789ಕ್ಕೂ ಅಧಿಕ ಗಾಯಕರು, 250ಕ್ಕೂ ಹೆಚ್ಚು ಸಂಗೀತ ಸಂಯೋಜಕರು ರಚಿಸಿರುವ 4,500ಕ್ಕೂ ಅಧಿಕ ಕೊಂಕಣಿ ಹಾಡುಗಳನ್ನು ಪ್ರಸ್ತುತಪಡಿಸುವ ಯೋಜನೆ ರೂಪಿಸಲಾಗಿದೆ. ಪ್ರತಿಯೊಂದು ತಂಡವೂ ಒಂದು ಗಂಟೆ ಕಾಲ ಗಾಯನ ನಡೆಸಲಿದ್ದು, ಗಾಯಕರು ಪುನರಾವರ್ತನೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಸಂಗೀತ ಗುರು ಜೊಯೆಲ್ ಪಿರೇರಾ ಪ್ರಧಾನ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಪ್ರಯತ್ನಕ್ಕಾಗಿ ಗಿನ್ನೆಸ್ ಸಂಸ್ಥೆಯಲ್ಲಿ ನೋಂದಣಿ ಮಾಡಲಾಗಿದ್ದು, ಅಧಿಕೃತ ಹಿರಿಯ ತೀರ್ಪುಗಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರಿಂದ ಸಮ್ಮೇಳನ ಉದ್ಘಾಟನೆ:
ನವೆಂಬರ್ 3ರಂದು ಬೆಳಿಗ್ಗೆ 5 ಗಂಟೆಗೆ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ ವಂ. ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಆಶೀರ್ವಚನ ನೀಡಲಿದ್ದು, ಸ್ವಾಗತ ಸಮಿತಿ ಅಧ್ಯಕ್ಷ ಡಾ. ರೊನಾಲ್ಡ್ ಕುಲಾಸೊ ಅಧ್ಯಕ್ಷತೆ ವಹಿಸಲಿದ್ದಾರೆ.
ಕೊಂಕಣಿ ಸಂಗೀತದ ವಿವಿಧ ಆಯಾಮಗಳ ಕುರಿತು 12 ವಿಚಾರಗೋಷ್ಠಿ:
ಸಮ್ಮೇಳನಕ್ಕೆ ಶೈಕ್ಷಣಿಕ ಹಾಗೂ ಅಂತರರಾಷ್ಟ್ರೀಯ ಆಯಾಮ ನೀಡುವ ನಿಟ್ಟಿನಲ್ಲಿ 12 ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದೆ. ಕೊಂಕಣಿ ಭಕ್ತಿ ಸಂಗೀತ, ಜನಪದ ಸಂಗೀತ, ಬಾಯ್ಲಾ ಸಂಗೀತ, ಆರೋಗ್ಯಕ್ಕಾಗಿ ಸಂಗೀತ, ಅಂತರರಾಷ್ಟ್ರೀಯ ಸಂಗೀತ, ರಂಗಭೂಮಿ ಮತ್ತು ಸಿನಿಮಾ ಸಂಗೀತ, ಸಂಗೀತಗಾರರು ಹಾಗೂ ಅವರ ರಚನೆಗಳು, ಮಾಂಡ್ ಸೊಭಾಣ್ ಸಂಗೀತದ ಪ್ರಭಾವ, ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಕೃತಕ ಬುದ್ಧಿಮತ್ತೆ ಹಾಗೂ ಸಂಗೀತದ ನಡುವಿನ ಸಂಬಂಧ ಮೊದಲಾದ ವಿಷಯಗಳ ಕುರಿತು ತಜ್ಞರು ಪ್ರಬಂಧ ಮಂಡಿಸಲಿದ್ದಾರೆ.
12 ಹಿರಿಯ ಸಂಗೀತ ಸಾಧಕರಿಗೆ ‘ವಿಶ್ವ ಕೊಂಕಣಿ ಸಂಗೀತ ಸಾಧನಾ ಪುರಸ್ಕಾರ ಗೌರವ:
ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ 12 ಹಿರಿಯ ಸಾಧಕರಿಗೆ ‘ವಿಶ್ವ ಕೊಂಕಣಿ ಸಂಗೀತ ಸಾಧನಾ ಪುರಸ್ಕಾರ’ ನೀಡಿ ಗೌರವಿಸಲಾಗುತ್ತದೆ. ಇವರಲ್ಲಿ ಐವರಿಗೆ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕ್ರಿಸ್ ಪೆರಿ, ಲಾರೆನ್ಸ್ ಸಲ್ಡಾನ್ಹಾ, ಫಾ. ಲಿನೊ ಡೆಸಾ, ವಸಂತಿ ಆರ್. ನಾಯಕ್, ಆಲ್ಫ್ರೆಡ್ ರೋಸ್, ಶ್ರೀಧರ್ ಖಾರ್ವಿ, ಮೆಲ್ವಿನ್ ಪೆರಿಸ್, ನೇಮಿರಾಜ ಗೌಡ, ಜೆರೊಮ್ ಡಿಸೋಜ, ಮಾಮ್ದು ಇಬ್ರಾಹಿಂ, ಉಲ್ಲಾಸ್ ಬುಯಾಂವ್ ಮತ್ತು ಜುಲಿಯಾನ ಸಿದ್ದಿ ಅವರು ಗೌರವಕ್ಕೆ ಆಯ್ಕೆಯಾಗಿದ್ದಾರೆ.
10ರಿಂದ 16 ವರ್ಷದ ಮಕ್ಕಳಿಗಾಗಿ ‘ಫುಲ್ ಫುಲೊತಾ’ ಸಂಗೀತ ವಿಶೇಷ ಸಂಜೆ:
10ರಿಂದ 16 ವರ್ಷದ ಮಕ್ಕಳನ್ನು ಕೊಂಕಣಿ ಸಂಗೀತದೊಂದಿಗೆ ಬೆಸೆಯುವ ಉದ್ದೇಶದಿಂದ ನವೆಂಬರ್ 13ರಂದು ‘ಫುಲ್ ಫುಲೊತಾ’ ಎಂಬ ವಿಶೇಷ ಸಂಗೀತ ಕಾರ್ಯಕ್ರಮವನ್ನು ರಾಜಾಜಿ ಪಾರ್ಕಿನ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಇದರೊಂದಿಗೆ ಪುರಭವನದ ಹೊರಾಂಗಣದಲ್ಲಿ ಕೊಂಕಣಿ ಸಂಗೀತ, ಜನಜೀವನ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ವಸ್ತುಪ್ರದರ್ಶನ ನಡೆಯಲಿದೆ. ಕೊಂಕಣಿ ಸಂಗೀತ ಕ್ಷೇತ್ರದ ಹಿರಿಯ ಹಾಗೂ ಕಿರಿಯ ಕಲಾವಿದರ ಪರಿಚಯ ನೀಡುವ ‘ಕೀರ್ತಿ ಮಂದಿರ’ ಮತ್ತು ವಿವಿಧ ಕೊಂಕಣಿ ಸಮುದಾಯಗಳ ಸಾಂಪ್ರದಾಯಿಕ ಖಾದ್ಯಗಳ ಮಾರಾಟ ಮಳಿಗೆಗಳೂ ಇರಲಿವೆ.
ನ.15ರಂದು ಸಂಜೆ ಸಮಾರೋಪ:
ನವೆಂಬರ್ 15ರಂದು ಸಂಜೆ 6.12ಕ್ಕೆ ನಿರಂತರ ಗಾಯನದ ಕಾರ್ಯಕ್ರಮ ಮುಕ್ತಾಯಗೊಳ್ಳಲಿದ್ದು, ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ. ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.
ಸಾವಿರಾರು ಹಾಡುಗಳ ಸಂಗ್ರಹ ಮತ್ತು ಸಾಹಿತ್ಯದ ದಾಖಲೀಕರಣ, 300 ತಂಡಗಳ ರಚನೆ :
ಈ ಮಹಾ ಸಮ್ಮೇಳನಕ್ಕಾಗಿ ಅಂದಾಜು ಮೂರು ಕೋಟಿ ರೂಪಾಯಿ ವೆಚ್ಚ ನಿರೀಕ್ಷಿಸಲಾಗಿದೆ. ಸಾವಿರಾರು ಹಾಡುಗಳ ಸಂಗ್ರಹ ಮತ್ತು ಸಾಹಿತ್ಯದ ದಾಖಲೀಕರಣ, 300 ತಂಡಗಳ ರಚನೆ, ಹಾಡುಗಳ ಹಂಚಿಕೆ, ಮೈನಸ್ ಟ್ರ್ಯಾಕ್ ಸಿದ್ಧಪಡಿಸುವಿಕೆ, ಪೂರ್ವಾಭ್ಯಾಸದ ಮೇಲ್ವಿಚಾರಣೆಗಾಗಿ 40 ಸಹಾಯಕ ಸಂಗೀತ ನಿರ್ದೇಶಕರ ನೇಮಕ, ಕಲಾವಿದರಿಗೆ ವಸತಿ, ಪ್ರಯಾಣ ಮತ್ತು ಊಟೋಪಚಾರದ ವ್ಯವಸ್ಥೆ ಸೇರಿದಂತೆ ಹಲವು ತಿಂಗಳಿನಿಂದ ಸಿದ್ಧತೆಗಳನ್ನು ನಡೆಸಲಾಗಿದೆ.
ಕೊಂಕಣಿ ಸಂಗೀತದ ಬೆಳವಣಿಗೆಗೆ ಹೊಸ ದಿಕ್ಕು ನೀಡುವ ಮತ್ತು ಮುಂದಿನ ಪೀಳಿಗೆಗೆ ಈ ಶ್ರೀಮಂತ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸರಕಾರ, ಸಾರ್ವಜನಿಕರು ಹಾಗೂ ಮಾಧ್ಯಮಗಳು ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಆರ್ಥಿಕ ಸಮಿತಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ, ಪ್ರಧಾನ ಸಂಗೀತ ನಿರ್ದೇಶಕ ಜೊಯೆಲ್ ಪಿರೇರಾ, ಸಂಘಟಕ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ ಮತ್ತು ಗೋವಾ ಸಂಯೋಜಕ ಮೈಕಲ್ ಜೂಡ್ ಗ್ರೇಶಿಯಸ್ ಉಪಸ್ಥಿತರಿದ್ದರು.
_Sathish Kapikad