ಆರೋಪಿ ಚೇತನ್

ಮಂಗಳೂರು, ಜುಲೈ.17: ಬಂಟ್ವಾಳ ತಾಲೂಕಿನ ಬಿಸಿ ರೋಡ್‌ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದಿದ್ದ ಲಾವಣ್ಯ ಗೌಡ ಭೀಕರ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಳ್ತಂಗಡಿ ತಾಲೂಕಿನ ಓಡಿಲ್ನಾಲ್ ನಿವಾಸಿ ಚೇತನ್ ಗೌಡ ಬಂಧಿತ ಆರೋಪಿ.

ಘಟನೆ ನಡೆದ ಬಳಿಕ ಆರೋಪಿಯ ಪತ್ತೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮೂರು ವಿಶೇಷ ತಂಡಗಳನ್ನು ರಚಿಸಿ ವ್ಯಾಪಕ ತನಿಖೆ ಕೈಗೊಂಡಿದ್ದರು.

ಇದೀಗ ಬಂಟ್ವಾಳ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪದವಿನಂಗಡಿ ಸಮೀಪದ ಪಚ್ಚನಾಡಿ ಬಳಿ ಬಂಧಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಆರೋಪಿ ಯುವತಿಯನ್ನು ಪ್ರೀತಿಸುತ್ತಿದ್ದು, ಹಲವು ದಿನಗಳಿಂದ ಯುವತಿಯನ್ನು ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. ಆದರೆ ಯುವತಿ ಈತನ ಪ್ರೀತಿಗೆ ಒಪ್ಪದ ಕಾರಣ ಏಕಪಕ್ಷೀಯ ಪ್ರೀತಿಯ ಉನ್ಮಾದದಲ್ಲಿ ಯುವತಿಯನ್ನು ಹತ್ಯೆಗೈದು ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ.

ಗುರುವಾರ ಸಂಜೆ ಸುಮಾರು 6 ಗಂಟೆಯ ಸಮಯ. ಬಿಸಿ ರೋಡ್‌ನ ಕೆಎಸ್‌ಆರ್‌ಟಿಸಿ ನೂತನ ಬಸ್ ನಿಲ್ದಾಣದಲ್ಲಿ ಎಂದಿನಂತೆ ಪ್ರಯಾಣಿಕರ ದಟ್ಟಣೆ ಇತ್ತು. ಕಕೈ ಪದವು ನಿವಾಸಿಯಾದ 21 ವರ್ಷದ ಲಾವಣ್ಯ ಗೌಡ ಎಂಬ ಯುವತಿ ಊರಿಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದರು.

ಈ ವೇಳೆ ಯುವತಿಯನ್ನು ಹಿಂಬಾಲಿಸಿಕೊಂಡು ಅಲ್ಲಿಗೆ ಬಂದಿದ್ದ ಆರೋಪಿ ಚೇತನ್ ಗೌಡ ಹಾಡುಹಗಲೇ ಲಾವಣ್ಯ ಮೇಲೆ ಹರಿತವಾದ ಆಯುಧದಿಂದ ಭೀಕರ ದಾಳಿ ನಡೆಸಿ ಪರಾರಿಯಾಗಿದ್ದ.

ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಯುವತಿಯನ್ನು ತಕ್ಷಣವೇ ಸ್ಥಳೀಯರು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಲಾವಣ್ಯ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಚೇತನ್, ಮೃತ ಲಾವಣ್ಯಳ ದೂರದ ಸಂಬಂಧಿಯಾಗಿದ್ದ ಎಂದು ತಿಳಿದುಬಂದಿದೆ. ಪೊಲೀಸರು ಮಂದಿನ ತನಿಖೆ ನಡೆಸುತ್ತಿದ್ದಾರೆ.

_ Sathish kapikad 

Share.
Leave A Reply

Exit mobile version