ಪದ್ಮಶ್ರೀ ವಿಜೇತ ಗಿರೀಶ್ ಭಾರಧ್ವಾಜ್

ದೇಶದ ಖ್ಯಾತ ತೂಗು ಸೇತುವೆ ತಜ್ಞರಾದ ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಗಿರೀಶ್ ಭಾರಧ್ವಾಜ್ ಅವರು ವಿಧಿವಶರಾಗಿರುವ ಸುದ್ದಿ ತಿಳಿದು ತೀವ್ರ ದುಃಖ ವ್ಯಕ್ತಪಡಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಅವರು ಸಂತಾಪ ಸೂಚಿಸಿದ್ದಾರೆ.

ಗಿರೀಶ್ ಭಾರಧ್ವಾಜ್ ಅವರು ತಮ್ಮ ವಿಶಿಷ್ಟ ತಾಂತ್ರಿಕ ಪರಿಣತಿ ಮತ್ತು ಸಮರ್ಪಿತ ಸೇವೆಯಿಂದ ದೇಶದಾದ್ಯಂತ ಅನೇಕ ತೂಗು ಸೇತುವೆಗಳ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.ಅನೇಕ ದ್ವೀಪ ಪ್ರದೇಶದ ನಾಗರಿಕರಿಗೆ ತಮ್ಮ ದೈನಂದಿನ ಚಟುವಟಿಕೆಗಳಿಗೆ ಇತರ ಪ್ರದೇಶಗಳಿಗೆ ತೆರಳಲು ಆಧಾರವಾಗಿರುವ ಬಹು ಮುಖ್ಯ ಇರುವ ದೇಶದ ಅನೇಕ ತೂಗು ಸೇತುವೆಗಳು ಇವರ ಮೇಲುಸ್ತುವಾರಿಯಲ್ಲಿ ನಿರ್ಮಾಣವಾಗಿದೆ.

ನನ್ನ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ ತಾಲೂಕಿನ ಪಾವೂರು ಗ್ರಾಮದ ಉಳಿಯ ಪ್ರದೇಶದಲ್ಲಿ ನಿರ್ಮಾಣವಾಗುವ ತೂಗು ಸೇತುವೆ ರೂಪುರೇಷೆ ರಚಿಸಲು ನಾನು ಅವರ ಜತೆಗೂಡಿ ಸ್ಥಳ ಪರಿಶೀಲನೆ ನಡೆಸಿದ್ದು ಇಲ್ಲಿ ಸ್ಮರಿಸಬಹುದು.

ಅವರ ಕೊಡುಗೆ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸದಾ ಸ್ಮರಣೀಯವಾಗಿರುತ್ತದೆ.ಅವರ ಮಗ ಕೂಡಾ ತೂಗು ಸೇತುವೆ ನಿರ್ಮಾಣದಲ್ಲಿ ಪರಿಣಿತಿ ಹೊಂದಿರುವುದು ಮತ್ತೊಂದು ವಿಶೇಷ ಎಂದು ಸಚಿವರು ಹೇಳಿದ್ದಾರೆ.

ಅವರ ಅಗಲಿಕೆಯಿಂದ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ.ಸರಕಾರದ ವತಿಯಿಂದ ಪೊಲೀಸ್ ಗೌರವದೊಂದಿಗೆ ಅಂತಿಮ ವಿದಾಯ ಸಲ್ಲಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು,ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಸ್ಥರಿಗೆ,ಹಿತೈಷಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಸಚಿವ ಯು.ಟಿ. ಖಾದರ್ ಅವರು ಪ್ರಾರ್ಥಿಸಿದ್ದಾರೆ.

_Sathish Kapikad 

Share.
Leave A Reply

Exit mobile version