ಮಂಗಳೂರು, ಜುಲೈ.04 : ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ತಮ್ಮ ಜನಪರ ಕಾರ್ಯಗಳಿಂದ ಇಂದು ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರನ್ನೇ ಮೀರಿಸುತ್ತಿದ್ದಾರೆ. ಸಹಕಾರಿ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಅಪಾರವಾದುದು. ಸಹಕಾರಿ ಕ್ಷೇತ್ರದ ಕಾರ್ಯವೈಖರಿಯನ್ನು ಇಡೀ ರಾಜ್ಯಕ್ಕೆ ತೋರಿಸಿಕೊಡುವ ಮೂಲಕ ಅವರು ಶ್ಲಾಘನೀಯ ಕಾರ್ಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಖ್ಯಾತ ಉದ್ಯಮಿ ಜೆ.ಕೃಷ್ಣ ಪಾಲೇಮಾರ್ ಹೇಳಿದರು.

ಅವರು ಶನಿವಾರ ಎಸ್ ಸಿಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯ ಮೊಳಹಳ್ಳಿ ಶಿವರಾವ್ ಸಭಾಭವನದಲ್ಲಿ “ಸಹಕಾರಿ ಪಿತಾಮಹ” ದಿ.ಮೊಳಹಳ್ಳಿ ಶಿವರಾವ್‌ ಸ್ಮರಣಾರ್ಥವಾಗಿ ಹಮ್ಮಿಕೊಳ್ಳಲಾದ “ಪ್ರತಿಭಾ ಪುರಸ್ಕಾರ”
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಇದೇ ವೇಳೆ 2025-26ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹತ್ತನೇ ತರಗತಿ ಹಾಗೂ ಪದವಿಪೂರ್ವ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿಸಿ ಸಾಧನೆಗೈದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಮತ್ತು ಬ್ಯಾಂಕಿನ ಸಿಬ್ಬಂದಿಗಳ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ ವಿತರಣೆಯನ್ನು ನೆರವೇರಿಸಿದ ಪಾಲೆಮಾರ್ ಅವರು, “ಪ್ರತಿಭಾ ಪುರಸ್ಕಾರದಿಂದ ಇನ್ನುಳಿದ ಮಕ್ಕಳು ಕೂಡ ಪ್ರೇರೇಪಣೆ ಪಡೆಯುತ್ತಾರೆ. ವಿದ್ಯಾರ್ಥಿಗಳಿಗೆ ಪುರಸ್ಕಾರ, ಸನ್ಮಾನ ಮಾಡುವ ಉದ್ದೇಶ ನೀವು ಬೆಳೆಯುತ್ತ ದೇಶದ ಆಸ್ತಿಯಾಗಬೇಕು. ಶಿಕ್ಷಣ ಮಾತ್ರವಲ್ಲದೆ ಎಲ್ಲಾ ಕ್ಷೇತ್ರದ ವಿದ್ಯಾರ್ಥಿಗಳನ್ನು ಗುರುತಿಸುವ ಮೂಲಕ ಇತರರಿಗೆ ಮಾದರಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಅವರಿಗೆ ಅಭಿನಂದನೆಗಳು“ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು, “ವಿದ್ಯಾರ್ಥಿಗಳು ಇನ್ನಷ್ಟು ಬೆಳೆಯಬೇಕು, ಸಮಾಜಕ್ಕೆ ಇನ್ನಷ್ಟು ಸೇವೆ ಸಲ್ಲಿಸಬೇಕು ಎಂಬ ನಿಟ್ಟಿನಲ್ಲಿ ಅವರಿಗೆ ಪ್ರೋತ್ಸಾಹ ತುಂಬಲು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ನವೋದಯ ಗ್ರಾಮ ವಿಕಾಸ ಯೋಜನೆಯಲ್ಲಿ 90 ಶೇಕಡಾ ಮಹಿಳೆಯರಿದ್ದು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಇಂದು ಇಲ್ಲಿ ಪುರಸ್ಕಾರ ಪಡೆದಿರುವ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ, ಮಕ್ಕಳು ದೇಶಕಟ್ಟುವ ಕಾಯಕದಲ್ಲಿ ತೊಡಗಲಿ. ಮುಂದೆ ಕನಿಷ್ಠ ಇಬ್ಬರು ಮಕ್ಕಳಿಗಾದರೂ ನೆರವಾದರೆ ನಮ್ಮ ಶ್ರಮ ಸಾರ್ಥಕ“ ಎಂದರು.

ಬ್ಯಾಂಕ್ ಉಪಾಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಭಾಸ್ಕರ್ ಕೋಟ್ಯಾನ್, ಬ್ಯಾಂಕ್ ಎಂ.ಡಿ. ಗೋಪಾಲಕೃಷ್ಣ ಭಟ್, ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಎಂ.ಡಿ.ಪ್ರವೀಣ್ ನಾಯ್ಕ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್್ ಹಾಗೂ ಬ್ಯಾಂಕ್ ನ ಇತರ ನಿರ್ದೇಶಕರು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಚಿತ್ರಲೇಖ ಶೆಟ್ಟಿ ಪ್ರಾರ್ಥಿಸಿದರು. ರಾಜೇಶ್ ಶೆಟ್ಟಿ ವಂದನಾರ್ಪಣೆಗೈದರು. ಕಾರ್ಯಕ್ರಮದ ಆರಂಭದಲ್ಲಿ ಯೋಗಾಪ್ರತಿಭೆ ತನುಶ್ರೀ ಪಿತ್ರೋಡಿ ಅವರಿಂದ ಯೋಗ ಪ್ರದರ್ಶನ ನೆರವೇರಿತು.

_Sathish Kapikad

Share.
Leave A Reply

Exit mobile version