
ಮಂಗಳೂರು : ನಗರದ ಬೋಳೂರಿನ ಶ್ರೀ ಜಾರಂದಾಯ ದೈವಸ್ಥಾನದ ಆಸುಪಾಸಿನ ಪರಿಸರದಲ್ಲಿ ಸ್ಥಳೀಯರ ಪ್ರಮುಖ ಸಮಸ್ಯೆಯಾಗಿರುವ ಒಳಚರಂಡಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ವೇದವ್ಯಾಸ ಕಾಮತ್ ರವರು ಜಿಲ್ಲಾಧಿಕಾರಿ ದರ್ಶನ್ ರವರ ಸಮ್ಮುಖದಲ್ಲಿ ಕುಡ್ಸೆಂಪ್ ವ್ಯವಸ್ಥಾಪಕ ನಿರ್ದೇಶಕರಾದ ಭೂಬಾಲನ್ ಟಿ. ಯವರನ್ನು ಭೇಟಿ ಮಾಡಿದರು.
ಕಳೆದ 75 ವರ್ಷಗಳಿಂದಲೂ ಈ ಭಾಗದಲ್ಲಿ ಡ್ರೈನೇಜ್ ಇಲ್ಲದಿರುವುದೇ ಜನರ ಬಹುದೊಡ್ಡ ಸಮಸ್ಯೆಯಾಗಿದೆ. ಈ ಹಿಂದೆ ಕುಡ್ಸೆಂಪ್ ನಿಂದ ಅಗತ್ಯ ಅನುದಾನಗಳನ್ನು ಮೀಸಲಿಟ್ಟಿದ್ದರೂ, ಇಲ್ಲಿ ನೆಲದಡಿ ಇರುವ ಬಂಡೆಕಲ್ಲುಗಳಂತಹ ಭೌಗೋಳಿಕ ಸಮಸ್ಯೆಯ ಕಾರಣದಿಂದ ಯೋಜನೆ ಸಾಕಾರಗೊಳ್ಳಲಿಲ್ಲ. ಈ ಬಗ್ಗೆ ಮತ್ತೊಮ್ಮೆ ಸಂಬಂಧಪಟ್ಟ ಅಧಿಕಾರಿಗಳ, ಸಂಘಸಂಸ್ಥೆಗಳ, ಸ್ಥಳೀಯರ ಸಮಗ್ರ ಚರ್ಚೆ ನಡೆಸಿದ್ದು, ಯೋಜನೆಗಾಗಿ ಎರಡೂವರೆಯಿಂದ ಮೂರು ಕೋಟಿ ಅನುದಾನ ಅಗತ್ಯವಿರುವ ಬಗ್ಗೆ ಅಂದಾಜಿಸಲಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಲೇಬೇಕೆಂಬುದು ಎಲ್ಲರ ಆಶಯವಾಗಿದ್ದು ಈ ನಿಟ್ಟಿನಲ್ಲಿ ಅಗತ್ಯ ಅನುದಾನಗಳ ಸಹಿತ ಸಹಕಾರ ನೀಡುವಂತೆ ಶಾಸಕರು ಮನವಿ ಮಾಡಿದರು.

ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ ಕುಡ್ಸೆಂಪ್ ವ್ಯವಸ್ಥಾಪಕ ನಿರ್ದೇಶಕರು, ಕುಡ್ಸೆಂಪ್ ನಲ್ಲಿ ಯಾವುದೇ ಉಳಿಕೆ ಅಥವಾ ಹೆಚ್ಚುವರಿ ಅನುದಾನಗಳ ಲಭ್ಯತೆಯನ್ನು ಗಮನಿಸಿಕೊಂಡು ಶಾಸಕರ ಮನವಿಯಂತೆ ಯೋಜನೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೇ ಅಧಿಕಾರಿಗಳು ಈ ಬಗ್ಗೆ ಶೀಘ್ರವಾಗಿ ವರದಿ ಸಲ್ಲಿಸುವಂತೆಯೂ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಾದ ರವಿಚಂದ್ರ ನಾಯಕ್ ಸಹಿತ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
_Sathish Kapikad


