
ಮಂಗಳೂರು, ಜೂನ್ 10 : ದಿವಂಗತ ಶಿಕ್ಷಣ ದಾರ್ಶನಿಕ ಹಾಗೂ ಸಂಸ್ಥಾಪಕರಾದ ಡಾ. ಸಿ.ಎ. ಎ. ರಾಘವೇಂದ್ರ ರಾವ್ ಅವರ ದೂರದೃಷ್ಟಿಯ ಫಲವಾಗಿ ಬೆಳೆದಿರುವ ಶ್ರೀನಿವಾಸ ಸಂಸ್ಥೆಗಳು ಇಂದು ಉನ್ನತ ಶಿಕ್ಷಣ, ಸಂಶೋಧನೆ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಮುಖಿ ಶಿಕ್ಷಣ ಕ್ಷೇತ್ರಗಳಲ್ಲಿ ದೇಶದ ಪ್ರಮುಖ ಶಿಕ್ಷಣ ಸಮೂಹಗಳಲ್ಲಿ ಒಂದಾಗಿ ಗುರುತಿಸಿಕೊಂಡಿವೆ.
“ಸ್ಥಳೀಯ ಪ್ರತಿಭೆಗಳಿಗೆ ಜಾಗತಿಕ ಅವಕಾಶಗಳನ್ನು ಕಲ್ಪಿಸುವುದು” ಎಂಬ ಧ್ಯೇಯದೊಂದಿಗೆ ಶಿಕ್ಷಣ, ಸಂಶೋಧನೆ ಮತ್ತು ನವೀನತೆಯ ಕ್ಷೇತ್ರದಲ್ಲಿ ನಿರಂತರ ಸಾಧನೆ ಮಾಡುತ್ತಿರುವ ಶ್ರೀನಿವಾಸ ಸಂಸ್ಥೆಗಳು ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಿವೆ ಎಂದು ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಶ್ರೀನಿವಾಸ ರಾವ್ ಅವರು ಶ್ರೀನಿವಾಸ ಸಂಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅವರು ಬುಧವಾರ ಮಂಗಳೂರಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ ಸಂಸ್ಥೆಗಳಿಗೆ ಮೂರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿರುವ ಬಗ್ಗೆ ಹಾಗೂ ಶ್ರೀನಿವಾಸ ಸಂಸ್ಥೆಗಳ ವಿವಿಧ ಸಾಧನೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸಿರುವ ಕುರಿತು ಮಾಹಿತಿಗಳನ್ನು ನೀಡಿದರು.
TCS, Microsoft, IBM, Google, Intel, UiPath ಸೇರಿದಂತೆ ಅನೇಕ ಬಹುರಾಷ್ಟ್ರೀಯ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಸಹಭಾಗಿತ್ವ ಹೊಂದಿರುವ ವಿಶ್ವವಿದ್ಯಾಲಯವು ಕರ್ನಾಟಕದಲ್ಲೇ ಮೊದಲ ಬಾರಿಗೆ Aircraft Maintenance Engineering ನಲ್ಲಿ ನಾಲ್ಕು ವರ್ಷದ B.Tech ಕಾರ್ಯಕ್ರಮವನ್ನು ಆರಂಭಿಸಿದೆ. Ethnotech ಹಾಗೂ NSDC ಸಹಯೋಗದಲ್ಲಿ ಸ್ಥಾಪಿತವಾದ ಸಿ.ಎ. ರಾಘವೇಂದ್ರ ರಾವ್ ಸೆಂಟರ್ ಫಾರ್ ಫ್ಯೂಚರ್ ಸ್ಕಿಲ್ ಲ್ಯಾಬ್ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಕೌಶಲ್ಯ ತರಬೇತಿಯನ್ನು ಒದಗಿಸುತ್ತಿದೆ.
ಸಂಶೋಧನಾ ಕ್ಷೇತ್ರದಲ್ಲಿಯೂ ಶ್ರೀನಿವಾಸ್ ವಿಶ್ವವಿದ್ಯಾಲಯವು 593 ಕಾಪಿರೈಟ್ಗಳು, 28 ಪೇಟೆಂಟ್ಗಳು, 157ಕ್ಕೂ ಅಧಿಕ ಪೇಟೆಂಟ್ ಪ್ರಕಟಣೆಗಳು ಹಾಗೂ 2000ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಸಂಶೋಧನಾ ಪ್ರಕಟಣೆಗಳನ್ನು ದಾಖಲಿಸಿದೆ. AICTE, ISRO, DST, KSCST ಸೇರಿದಂತೆ ವಿವಿಧ ಸಂಸ್ಥೆಗಳಿಂದ ರೂ.15 ಕೋಟಿಗೂ ಅಧಿಕ ಸಂಶೋಧನಾ ಅನುದಾನವನ್ನು ಪಡೆದುಕೊಂಡಿದೆ ಎಂದು ಡಾ. ಶ್ರೀನಿವಾಸ ರಾವ್ ಅವರು ತಿಳಿಸಿದರು.

ಈ ಸಾಧನೆಗಳ ಮುಂದುವರಿದ ಭಾಗವಾಗಿ ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿ ಆಯೋಜಿಸಲಾದ ಪ್ರತಿಷ್ಠಿತ Global Education Summit ನಲ್ಲಿ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಡಾ. ಶ್ರೀನಿವಾಸ ಮಯ್ಯ ಡಿ ಹಾಗೂ ತರಬೇತಿ ಮತ್ತು ನೇಮಕಾತಿ ಅಧಿಕಾರಿ ಡಾ. ಧೀರಜ್ ಹೆಬ್ರಿ ಅವರು ಭಾಗವಹಿಸಿ ಸಂಸ್ಥೆಯ ಶೈಕ್ಷಣಿಕ ಸಾಧನೆಗಳನ್ನು ಜಾಗತಿಕ ವೇದಿಕೆಯಲ್ಲಿ ಅನಾವರಣಗೊಳಿಸಿದರು.
Asian Institute of Technology (AIT), Dhurakij Pundit University (DPU), Siam University, Bangkok University ಹಾಗೂ EduSkills Foundation ಸಹಯೋಗದಲ್ಲಿ ಆಯೋಜಿಸಲಾದ ಈ ಶೃಂಗಸಭೆಯಲ್ಲಿ ಭಾರತ ಮತ್ತು ಥೈಲ್ಯಾಂಡ್ನ ಶಿಕ್ಷಣ ತಜ್ಞರು, ಉದ್ಯಮ ನಾಯಕರು ಹಾಗೂ ಸಂಶೋಧಕರು ಭಾಗವಹಿಸಿದರು ಎಂದರು.

ಈ ಸಂದರ್ಭದಲ್ಲಿ ಶ್ರೀನಿವಾಸ ಸಂಸ್ಥೆಗಳಿಗೆ ಮೂರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ:
• Global Excellence Award in Higher Education and Research – ಶ್ರೀನಿವಾಸ ವಿಶ್ವವಿದ್ಯಾಲಯಕ್ಕೆ
• Excellence in Industry Integrated Technical Education Award – ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ
• Visionary Education Leader Award – ಡಾ. ಶ್ರೀನಿವಾಸ ಮಯ್ಯ ಡಿ ಅವರಿಗೆ
ಈ ಪ್ರಶಸ್ತಿಗಳು ಶಿಕ್ಷಣ, ಸಂಶೋಧನೆ, ಉದ್ಯಮ-ಸಂಯೋಜಿತ ಕಲಿಕೆ ಹಾಗೂ ವಿದ್ಯಾರ್ಥಿ ಅಭಿವೃದ್ಧಿ ಕ್ಷೇತ್ರಗಳಲ್ಲಿ ಶ್ರೀನಿವಾಸ ಸಂಸ್ಥೆಗಳು ಸಾಧಿಸಿರುವ ಅತ್ಯುತ್ತಮ ಕೊಡುಗೆಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿರುವುದಾಗಿ ಪರಿಗಣಿಸಲಾಗಿದೆ ಎಂದು ಡಾ. ಶ್ರೀನಿವಾಸ ರಾವ್ ಅವರು ಪ್ರಶಸ್ತಿಗಳ ಕುರಿತು ವಿವರ ನೀಡಿದರು.
ಶ್ರೀನಿವಾಸ್ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ಹಾಗೂ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಡಾ. ಶ್ರೀನಿವಾಸ ಮಯ್ಯ ಡಿ ಅವರು ಮಾತನಾಡಿ, ಈ ಜಾಗತಿಕ ಮಾನ್ಯತೆ ಕುರಿತು ಸಂಸ್ಥೆಯ ಆಡಳಿತ ಮಂಡಳಿಯು ಸಂತಸ ವ್ಯಕ್ತಪಡಿಸಿದ್ದು, ಇದು ಕೇವಲ ಸಂಸ್ಥೆಯ ಸಾಧನೆಯಲ್ಲ; ಕರಾವಳಿ ಕರ್ನಾಟಕದ ಶಿಕ್ಷಣ ಕ್ಷೇತ್ರಕ್ಕೆ ದೊರೆತ ಅಂತರರಾಷ್ಟ್ರೀಯ ಗೌರವವಾಗಿದೆ ಎಂದು ನುಡಿದರು.
ಸಮ್ಮಿಟ್ನಲ್ಲಿ ಧುರಕಿಜ್ ಪುಂಡಿತ್ ವಿಶ್ವವಿದ್ಯಾಲಯದ ಸಹ ಉಪಾಧ್ಯಕ್ಷ ಶ್ರೀ ಅತಿತ್ ಕೊಯಿರಾಲಾ ಅವರು ಶಾಲಾ ಮತ್ತು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಹಾಗೂ ಬಹುಸಾಂಸ್ಕೃತಿಕ ಶಿಕ್ಷಣದ ಮಹತ್ವವನ್ನು ವಿವರಿಸಿದರು. ಸಿಯಾಮ್ ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ. ಯಿಹಿಂಗ್ ಸಾವ್ಹೆನಿ ಅವರು ಭಾರತ–ಥೈಲ್ಯಾಂಡ್ ಶಿಕ್ಷಣ ಸಹಕಾರದ ಮೂಲಕ ಉನ್ನತ ಶಿಕ್ಷಣವನ್ನು ಮತ್ತಷ್ಟು ಬಲಪಡಿಸುವ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ವಿವಿಧ ದೇಶಗಳ ಪ್ರತಿನಿಧಿಗಳು ಭವಿಷ್ಯದ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜಾಗತಿಕ ಸಹಭಾಗಿತ್ವದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಮ್ಮಿಟ್ನ ಅಂಗವಾಗಿ ಡಾ. ಶ್ರೀನಿವಾಸ ಮಯ್ಯ ಡಿ ಮತ್ತು ಡಾ. ಧೀರಜ್ ಹೆಬ್ರಿ ಅವರು ಥೈಲ್ಯಾಂಡ್ನ ಪ್ರಮುಖ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ಅಲ್ಲಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು, ಸಿಬ್ಬಂದಿ ವಿನಿಮಯ, ಸಂಯುಕ್ತ ಸಂಶೋಧನೆ, ಜಾಗತಿಕ ಇಂಟರ್ನ್ಶಿಪ್ಗಳು, ಉದ್ಯೋಗಾವಕಾಶಗಳು, ಆಧುನಿಕ ಪ್ರಯೋಗಾಲಯಗಳು ಮತ್ತು ಅತ್ಯಾಧುನಿಕ ಶೈಕ್ಷಣಿಕ ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.
ಈ ಜಾಗತಿಕ ಸಂಪರ್ಕಗಳು ಮತ್ತು ಸಹಭಾಗಿತ್ವಗಳು ಶ್ರೀನಿವಾಸ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣ, ಜಾಗತಿಕ ಅನುಭವ, ಸಂಶೋಧನಾ ಅವಕಾಶಗಳು ಮತ್ತು ಉತ್ತಮ ಉದ್ಯೋಗಾವಕಾಶಗಳನ್ನು ಒದಗಿಸಲು ನೆರವಾಗಲಿವೆ ಎಂದು ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ. ಶಿಕ್ಷಣ, ಸಂಶೋಧನೆ, ಉದ್ಯಮ ಸಹಭಾಗಿತ್ವ ಹಾಗೂ ಜಾಗತಿಕ ಅವಕಾಶಗಳ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶ್ರೀನಿವಾಸ ಸಂಸ್ಥೆಗಳು, ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿಶ್ವಾಸಾರ್ಹ ಆಯ್ಕೆಯಾಗಿ ಹೊರಹೊಮ್ಮಿವೆ.
“ಸ್ಥಳೀಯ ವಿದ್ಯಾರ್ಥಿಗಳಿಗೆ ಜಾಗತಿಕ ಶಿಕ್ಷಣ, ಜಾಗತಿಕ ಅನುಭವ ಮತ್ತು ಜಾಗತಿಕ ಉದ್ಯೋಗಾವಕಾಶಗಳನ್ನು ತಲುಪಿಸುವುದು ಶ್ರೀನಿವಾಸ ಸಂಸ್ಥೆಗಳ ಧ್ಯೇಯವಾಗಿದ್ದು, ಬ್ಯಾಂಕಾಕ್ನಲ್ಲಿ ದೊರೆತ ಈ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಆ ಧ್ಯೇಯದ ಯಶಸ್ಸಿಗೆ ದೊರೆತ ಜಾಗತಿಕ ಮುದ್ರೆಯಾಗಿದೆ.” ಎಂದು ಡಾ. ಶ್ರೀನಿವಾಸ ಮಯ್ಯ ಡಿ ಅವರು ಪೂರಕ ಮಾಹಿತಿಗಳನ್ನು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಸತ್ಯನಾರಾಯಣ ರೆಡ್ಡಿ, ಕುಲಸಚಿವರಾದ ಡಾ. ಅನಿಲ್ ಕುಮಾರ್, ಅಭಿವೃದ್ಧಿ ಕುಲಸಚಿವರಾದ ಡಾ. ಅಜಯ್ ಕುಮಾರ್, ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತರಬೇತಿ ಮತ್ತು ನೇಮಕಾತಿ ಅಧಿಕಾರಿ ಡಾ. ಧೀರಜ್ ಹೆಬ್ರಿ ಮುಂತಾದವರು ಪೂರಕ ಮಾಹಿತಿಗಳನ್ನು ನೀಡಿದರು.
_Sathish Kapikad

