
ಮಂಗಳೂರು: ಉರ್ವ ಬಳಿಯ ಶ್ರೀ ಕೊರಗಜ್ಜ ಕ್ಷೇತ್ರಕ್ಕೆ ಚಿನ್ನದ ಮುಟ್ಟಾಲೆ ಸಮರ್ಪಿಸುವ ಅಂಗವಾಗಿ ಧಾರ್ಮಿಕ ಸಭೆ ಗುರುವಾರ ಉರ್ವ ಮೈದಾನದಲ್ಲಿ ಜರಗಿತು.

ಧಾರ್ಮಿಕ ಸಭೆ ಉದ್ಘಾಟಿಸಿದ ಶ್ರೀ ಕ್ಷೇತ್ರ ಕದ್ರಿ ದೇವಸ್ಥಾನದ ದೇರೆಬೈಲ್ ಶ್ರೀ ವಿಠಲದಾಸ ತಂತ್ರಿ ಅವರು ಮಾತನಾಡಿ, ಶ್ರೀ ಕ್ಷೇತ್ರ ಕದ್ರಿಗೂ ಕೊರಗಜ್ಜನಿಗೂ ಅವಿನಾಭಾವ ಸಂಬಂಧ ಇರುವ ಐತಿಹ್ಯವಿದೆ. ತುಳುನಾಡಿನಾದ್ಯಂತ ಅಪಾರ ಭಕ್ತರು ನಂಬುವ ಕೊರಗಜ್ಜನು ಸರ್ವರಿಗೂ ಒಳಿತನ್ನುಂಟುಮಾಡಲಿ ಎಂದರು.
ಅಧ್ಯಕ್ಷತೆ ವಹಿಸಿದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಧಾರ್ಮಿಕ ಕ್ಷೇತ್ರದ ಆದಾಯದಲ್ಲಿ ನಿರ್ದಿಷ್ಟ ಮೊತ್ತವನ್ನು ವಿವಿಧ ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುತ್ತಿರುವ ಕೊರಗಜ್ಜ ಕ್ಷೇತ್ರದ ಆಡಳಿತ ಮಂಡಳಿಯ ಕಾರ್ಯ ಸ್ತುತ್ಯರ್ಹವಾಗಿದೆ ಎಂದರು.

ಮಠದಕಣಿ ಶನಿವಾರ ದೇವಸ್ಥಾನದ ಪ್ರಧಾನ ಅರ್ಚಕ ವಿದ್ಯಾಶಂಕರ್ ಭಟ್ ಅವರು ಮಾತನಾಡಿ, ಶ್ರೀ ಕ್ಷೇತ್ರದಲ್ಲಿ ಭಕ್ತರ ಸಂಕಷ್ಟ ನಿವಾರಣೆ ಮಾಡುವ ಕೊರಗಜ್ಜನ ನಿಜ ಅರ್ಥದ ಸಾನ್ನಿಧ್ಯ ಇರುವುದರಿಂದಲೇ ಸುಂದರ ವಿನ್ಯಾಸದ ಚಿನ್ನದ ಮುಟ್ಟಾಲೆಯನ್ನು ಕೊರಗಜ್ಜನಿಗೆ ಸಮರ್ಪಿಸಲು ಸಾಧ್ಯವಾಗಿದೆ ಎಂದರು.
ಜನಪದ ವಿದ್ವಾಂಸ ಡಾ|ಗಣೇಶ್ ಅಮೀನ್ ಸಂಕಮಾರ್ ಅವರು ಮಾತನಾಡಿ, ಅಪಾರ ಭಕ್ತರ ಸಹಕಾರದಿಂದ ಭವ್ಯ ಮೆರವಣಿಗೆಯ ಮೂಲಕ ಚಿನ್ನದ ಮುಟ್ಟಾಳೆಯನ್ನು ಕೊರಗಜ್ಜನಿಗೆ ಸಮರ್ಪಿಸಿದ ಆಡಳಿತ ಸಮಿತಿಯ ಕಾರ್ಯ ಶ್ಲಾಘನೀಯ ಎಂದರು. ಮುಖ್ಯ ಅತಿಥಿಗಳಾಗಿ ದಿನೇಶ್ ಬಿ., ಜಗದೀಶ ಶೆಟ್ಟಿ, ರಾಧಾಕೃಷ್ಣ ಅಶೋಕನಗರ, ಪ್ರವೀಣ್ ಸುವರ್ಣ, ವಿಜಯಕುಮಾರ್, ವಿಘ್ನೇಶ್ ಶೆಟ್ಟಿ, ಮಂಜುಷಾ ರೈ, ದಿವಾಕರ ಶೆಟ್ಟಿ, ಅನಿಲ್ ಶರ್ಮಾ, ಶ್ರೀಧರ್ ಕುಮಾರ್, ಬಾಲಕೃಷ್ಣ ಗುರಿಕಾರ, ಅರುಣ್ ಕುಮಾರ್, ಪೂವಪ್ಪ ಅಮೀನ್, ಬಾಬಾ ಅಲಂಕಾರ್, ವಸಂತ ಉರ್ವಸ್ಟೋರ್, ನಂದನ್ ಮಲ್ಯ, ಮನೋಜ್ ಕುಮಾರ್, ರಕ್ಷಿತ್ ಸಾಲ್ಯಾನ್, ನಿತಿನ್ ಬಿ. ಸಾಲ್ಯಾನ್, ಟಿ.ಎ.ಅಶೋಕನ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದೈವ ಚಾಕರಿ ಮಾಡುತ್ತಿರುವ ಪಾತ್ರಿ, ಮಧ್ಯಸ್ಥರು ಹಾಗೂ ಸಹಾಯಕರನ್ನು ಸನ್ಮಾನಿಸಲಾಯಿತು. ಆರೋಗ್ಯ ಸಮಸ್ಯೆಯುಳ್ಳವರಿಗೆ ಸಹಾಯಹಸ್ತ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಸತೀಶ್ ಶೆಟ್ಟಿ ಕೊಡಿಯಾಲಬೈಲ್ ಸ್ವಾಗತಿಸಿದರು. ದೀಪಕ್ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ರಾಜೇಶ್ ಉರ್ವ ವಂದಿಸಿದರು.
_Sathish Kapikad

