
ಮಂಗಳೂರು: ಕಾರ್ಮೆಲ್ ಸಿಬಿಎಸ್ಇ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ವಿಯಾ ಸಾಯಿ ರಚಿಸಿರುವ ಚೊಚ್ಚಲ ಕವನ ಸಂಕಲನ ‘ವೇರ್ ಮೈ ವರ್ಡ್ಸ್ ಬಿಗಿನ್’ (Where My Words Begin) ಪುಸ್ತಕವು ನಗರದ ಇಎಲ್ಸಿ ಕ್ಯಾಂಪಸ್ನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಬಿಡುಗಡೆಯಾಯಿತು.
ನಗರದ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಸಂಸ್ಥೆ ಹಾಗೂ ನಗರದ ಮೊದಲ ಮಕ್ಕಳ ಪುಸ್ತಕ ಕ್ಲಬ್ ‘ಬುಕ್ಹಾಲಿಕ್ಸ್ ಜೂನಿಯರ್’ ಜಂಟಿಯಾಗಿ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದ್ದವು.
ಪುಸ್ತಕವನ್ನು ಬಿಡುಗಡೆಗೊಳಿಸಿದ ಕಾರ್ಮೆಲ್ ಸಿಬಿಎಸ್ಇ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ರೋಸ್ವೀರಾ ಅವರು, ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇಂತಹ ಸಂದರ್ಭದಲ್ಲಿ ವಿಯಾ ಸಾಯಿಯಂತಹ ಪುಟ್ಟ ಪ್ರತಿಭೆಗಳು ಪುಸ್ತಕ ಪ್ರಕಟಿಸುತ್ತಿರುವುದು ಹಾಗೂ ಬುಕ್ಹಾಲಿಕ್ಸ್ ಜೂನಿಯರ್ ಮೂಲಕ ಯುವ ಓದುಗರು ಒಂದೆಡೆ ಸೇರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಸಾಹಿತ್ಯ ಕ್ಷೇತ್ರದ ಜೊತೆಗೆ ಫ್ಯಾಷನ್ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿಯೂ ವಿಯಾ ಸಾಧನೆ ಮಾಡಿರುವುದನ್ನು ಅವರು ಶ್ಲಾಘಿಸಿದರು. ವಿಯಾಳ ಪುಸ್ತಕವು ಇತರ ಮಕ್ಕಳಿಗೂ ಓದುವ ಮತ್ತು ಬರೆಯುವ ಹವ್ಯಾಸ ಬೆಳೆಸಿಕೊಳ್ಳಲು ಪ್ರೇರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಶ್ರೀನಿವಾಸನ್ ನಂದಗೋಪಾಲ್ ಅವರು, ಮಕ್ಕಳು ತಮ್ಮ ಕಲ್ಪನೆಗಳಿಗೆ ಮಿತಿಯಿಲ್ಲದೆ ರೆಕ್ಕೆ ನೀಡಬೇಕು ಹಾಗೂ ಅವುಗಳನ್ನು ಬರಹದ ರೂಪದಲ್ಲಿ ಅಭಿವ್ಯಕ್ತಪಡಿಸಬೇಕು ಎಂದು ಕರೆ ನೀಡಿದರು. ಮಕ್ಕಳ ಕಲ್ಪನೆಗೆ ಯಾವುದೇ ಗಡಿಯಿಲ್ಲ. ಇಂದಿನ ದಿನಗಳಲ್ಲಿ ಆನ್ಲೈನ್ ವೇದಿಕೆ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಮಕ್ಕಳ ಸಾಹಿತ್ಯ ಕೃತಿಗಳನ್ನು ಪ್ರಕಟಿಸಲು ವಿಪುಲ ಅವಕಾಶಗಳಿವೆ ಎಂದು ತಿಳಿಸಿದರು.
ಓದುವಿಕೆ ಕೇವಲ ಹವ್ಯಾಸವಾಗಿರದೆ ಬಾಲ್ಯದಿಂದಲೇ ಜೀವನದ ಒಂದು ಭಾಗವಾಗಬೇಕು. ಪುಸ್ತಕ ಓದುವ ಅಭ್ಯಾಸವು ಬರವಣಿಗೆಯ ಆಸಕ್ತಿಯನ್ನೂ ಬೆಳೆಸುತ್ತದೆ. ಇದೇ ಉದ್ದೇಶದಿಂದ ಬುಕ್ಹಾಲಿಕ್ಸ್ ಜೂನಿಯರ್ ವೇದಿಕೆಯು ಯುವ ಓದುಗರನ್ನು ಒಟ್ಟುಗೂಡಿಸಿ, ಅವರು ಓದಿದ ಪುಸ್ತಕಗಳ ಕುರಿತು ಚರ್ಚಿಸಲು ಅವಕಾಶ ಕಲ್ಪಿಸುತ್ತಿದೆ. ಇದರಿಂದ ವಿವಿಧ ಪ್ರಕಾರದ ಪುಸ್ತಕಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡುತ್ತಿದೆ ಎಂದು ಹೇಳಿದರು.
ಕಳೆದ 17 ವರ್ಷಗಳಿಂದ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಸಂಸ್ಥೆಯು ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅವರನ್ನು ಉತ್ತಮ ವ್ಯಕ್ತಿತ್ವವುಳ್ಳವರನ್ನಾಗಿ ರೂಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು.
ತಮ್ಮ ಮೊದಲ ಕವನ ಸಂಕಲನ ಬಿಡುಗಡೆಯಾದ ಹಿನ್ನೆಲೆಯಲ್ಲಿ ಯುವ ಕವಯತ್ರಿ ವಿಯಾ ಸಾಯಿ ಸಂತಸ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಕವನಗಳ ಜೊತೆಗೆ ಗದ್ಯ ಸಾಹಿತ್ಯವನ್ನೂ ರಚಿಸಿ ಮತ್ತಷ್ಟು ಪುಸ್ತಕಗಳನ್ನು ಪ್ರಕಟಿಸುವ ಆಶಯವನ್ನು ವ್ಯಕ್ತಪಡಿಸಿದರು. ಈ ಪುಸ್ತಕವನ್ನು ಈಗಾಗಲೇ ‘ಬುಕ್ ಲೀಫ್ ಪಬ್ಲಿಷಿಂಗ್’ ಎಂಬ ಆನ್ಲೈನ್ ವೇದಿಕೆಯ ಮೂಲಕ ಪ್ರಕಟಿಸಲಾಗಿದೆ. ವಿಯಾ ಸಾಯಿ ಅವರು ತಮ್ಮ ಸಾಹಿತ್ಯಿಕ ಸಾಧನೆಗಾಗಿ ಪ್ರತಿಷ್ಠಿತ ‘21ನೇ ಶತಮಾನದ ಎಮಿಲಿ ಡಿಕಿನ್ಸನ್ ಪ್ರಶಸ್ತಿ’ಯನ್ನೂ ಪಡೆದಿದ್ದಾರೆ.
ಕಾರ್ಯಕ್ರಮದಲ್ಲಿ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಸಚಿತಾ ನಂದಗೋಪಾಲ್, ವಿಯಾಳ ಪೋಷಕರಾದ ಭವ್ಯಾ ಮತ್ತು ಭರತ್ ಉಪಸ್ಥಿತರಿದ್ದರು.
ಬುಕ್ಹಾಲಿಕ್ಸ್ ಜೂನಿಯರ್ನ ಮುಖ್ಯ ಕ್ಯುರೇಟರ್ ಪ್ರಕೃತಿ ಕಾರ್ಯಕ್ರಮ ನಿರೂಪಿಸಿದರು. ಪುಸ್ತಕ ಕ್ಲಬ್ನ ಸದಸ್ಯ ಅಭಯ್ ಕಾರ್ತಿಕ್ ಸ್ವಾಗತಿಸಿದರು. ದ್ರವಿನ್ ವಂದಿಸಿದರು.
Sathish Kapikad