ಮಂಗಳೂರು : ಭಾರತ — ಮಾಂಡ್ ಸೊಭಾನ್ ಆಯೋಜಿಸಿರುವ ಐತಿಹಾಸಿಕ 12 ದಿನ, 12 ಗಂಟೆ ಮತ್ತು 12 ನಿಮಿಷಗಳ ಕೊಂಕಣಿ ಗಾಯನ ಮಾರಾಥಾನ್ ಮಂಗಳೂರಿನ ಟೌನ್ ಹಾಲ್‌ನಲ್ಲಿ ಯಶಸ್ವಿಯಾಗಿ 8ನೇ ದಿನಕ್ಕೆ ಕಾಲಿಟ್ಟಿದ್ದು, 180 ಗಂಟೆಗಳ ಮೈಲಿಗಲ್ಲನ್ನು ತಲುಪಿದೆ. ಇನ್ನು ಕೇವಲ ನಾಲ್ಕು ದಿನಗಳು ಬಾಕಿ ಉಳಿದಿದ್ದು, ಈ ಅಭೂತಪೂರ್ವ ಸಾಂಸ್ಕೃತಿಕ ಕಾರ್ಯಕ್ರಮವು ತನ್ನ ವಿಶ್ವ ದಾಖಲೆಯ ಗುರಿಯತ್ತ ವಿಜಯದ ನಡಿಗೆ ಮುಂದುವರಿಸಿದೆ.

ಇಲ್ಲಿಯವರೆಗೆ, 180 ಸಂಗೀತ ತಂಡಗಳು ವೇದಿಕೆ ಏರಿ, ಯಾವುದೇ ಅಡೆತಡೆಯಿಲ್ಲದೆ ನಿರಂತರ ಪ್ರದರ್ಶನಗಳನ್ನು ನೀಡುತ್ತಿದೆ. ಈ ಪ್ರಯತ್ನವು ಭೌಗೋಳಿಕ ಗಡಿಗಳನ್ನು ಮೀರಿ ಕೊಂಕಣಿ ಭಾಷಿಕರನ್ನು ಒಂದಗೂಡಿಸಿದ್ದು, ಕರಾವಳಿ ಕರ್ನಾಟಕ ಮಾತ್ರವಲ್ಲದೆ ಗೋವಾ, ಕೇರಳ ಮತ್ತು ವಿದೇಶಗಳಿಂದಲೂ ಉತ್ತಮ ತರಬೇತಿ ಪಡೆದ ಹಾಗೂ ಸಮರ್ಪಿತ ತಂಡಗಳು ಭಾಗವಹಿಸಿವೆ.

ಈ ಐತಿಹಾಸಿಕ ವೇದಿಕೆಯು ಇಂದು ಹಲವಾರು ಗಣ್ಯರ ಭೇಟಿಗೆ ಸಾಕ್ಷಿಯಾಯಿತು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ (MLC) ಐವನ್ ಡಿಸೋಜಾ, ಮಂಗಳೂರು ಮಹಾನಗರ ಪಾಲಿಕೆ (MCC) ಆಯುಕ್ತ ದರ್ಶನ್ ಹೆಚ್.ವಿ. (IAS), ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಕಲೆ, ರಾಜಕೀಯ ಮತ್ತು ಉದ್ಯಮ ರಂಗದ ಪ್ರಮುಖ ಗಣ್ಯರು ಟೌನ್ ಹಾಲ್‌ಗೆ ಭೇಟಿ ನೀಡಿ ತಮ್ಮ ಬೆಂಬಲ ಸೂಚಿಸಿದರು.

ನಿರಂತರ ನೇರ ಪ್ರಸಾರ ಮತ್ತು ಕಾರ್ಯಕ್ರಮ ನಿರ್ವಹಣೆಯನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಹಗಲಿರುಳು ಶ್ರಮಿಸುತ್ತಿರುವ ತಾಂತ್ರಿಕ ಸಿಬ್ಬಂದಿ ಹಾಗೂ ಆಯೋಜಕ ಸಮಿತಿಗೆ ಮತ್ತು ಪ್ರದರ್ಶನ ನೀಡಿದ ಕಲಾವಿದರಿಗೆ ಗಣ್ಯರು ಪ್ರಶಂಸೆ ವ್ಯಕ್ತಪಡಿಸಿದರು.

ಈ ಐತಿಹಾಸಿಕ ಮಾರಾಥಾನ್ ಒಟ್ಟು 12 ದಿನ, 12 ಗಂಟೆ ಮತ್ತು 12 ನಿಮಿಷಗಳ ಕಾಲ ನಡೆಯಲಿದ್ದು, ನವೆಂಬರ್ 15, ರವಿವಾರ ಸಂಜೆ 5:00 ಗಂಟೆಗೆ ಅದ್ಧೂರಿ ಸಮಾರೋಪದೊಂದಿಗೆ ಮುಕ್ತಾಯಗೊಳ್ಳಲಿದೆ. ಈ ವಿಶ್ವ ದಾಖಲೆಯ ಅಧಿಕೃತ ಘೋಷಣೆಗೆ ಸಾಕ್ಷಿಯಾಗಲು ಜಗತ್ತಿನಾದ್ಯಂತದ ಸಂಗೀತ ಪ್ರೇಮಿಗಳು, ಸಾಂಸ್ಕೃತಿಕ ಆಸಕ್ತರು ಮತ್ತು ಬೆಂಬಲಿಗರು ಭಾರಿ ಸಂಖ್ಯೆಯಲ್ಲಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

Sathish Kapikad 

Share.
Leave A Reply

Exit mobile version