ಮಂಗಳೂರು, ಅಕ್ಟೋಬರ್ 24, ‘ಆರ್ಥಿಕವಾಗಿ ಹಿಂದುಳಿದ ಜನಸಾಮಾನ್ಯರಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಮತ್ತು ಉನ್ನತ ಮಟ್ಟದ ಸೌಲಭ್ಯಗಳನ್ನು ಒದಗಿಸಿ ವೈದ್ಯಕೀಯ ಸೇವೆ ಸಲ್ಲಿಸುವುದು ನಮ್ಮ ವೈದ್ಯಕೀಯ ಸಂಸ್ಥೆಯ ಧ್ಯೇಯ ಮತ್ತು ಉದ್ದೇಶ’ ಎಂದು ಜಿ.ಆರ್. ಮೆಡಿಕಲ್ ಕಾಲೇಜು, ಆಸ್ಪತ್ರೆಯ ಅಧ್ಯಕ್ಷರಾದ ಗಣೇಶ್ ರಾವ್ ಅವರು ಘೋಷಿಸಿದ್ದಾರೆ.

ಅವರು ಜಿ.ಆರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮತ್ತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ 24-10-2026ರಂದು ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಮಾತ್ರವಲ್ಲದೆ ಬಡ ಅಸ್ವಸ್ಥರಿಗೆ ಉಚಿತ ಅಂಬುಲೆನ್ಸ್ ಸಾರಿಗೆ ವ್ಯವಸ್ಥೆಯನ್ನು ಕೂಡ ಒದಗಿಸಲಾಗುವುದು ಹಾಗೂ ಈ ಉಚಿತ ವೈದ್ಯಕೀಯ ಶಿಬಿರವನ್ನು ಪ್ರತಿ ತಿಂಗಳಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಶೆಟ್ಟಿ ಅವರು ತಮ್ಮ ಆಸ್ಪತ್ರೆಯಲ್ಲಿ ಉನ್ನತ ಮಟ್ಟದ ಮತ್ತು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಚಿಕಿತ್ಸೆ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಜನಸಾಮಾನ್ಯರ ಆರೋಗ್ಯ ರಕ್ಷಣೆ ನಮ್ಮ ಗುರಿ. ಆಸ್ಪತ್ರೆಯಲ್ಲಿ 720 ಹಾಸಿಗೆಗಳಿದ್ದು 190 ವೈದ್ಯಕೀಯ ತಜ್ಞರು ಹಗಲಿರುಳು 24 ಗಂಟೆಗಳ ತುರ್ತು ವೈದ್ಯಕೀಯ ಸೇವೆ ನೀಡಲಿರುವರು ಎಂದು ಮಾಹಿತಿ ನೀಡಿದರು.

ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷರಾದ ರವೀಂದ್ರ ಅವರು ಶಿಬಿರಕ್ಕೆ ನಮ್ಮ ಸಂಸ್ಥೆಯ ಸಂಪೂರ್ಣ ಸಹಕಾರವಿದೆ ಎಂದು ನುಡಿದು, ಶಿಬಿರಕ್ಕೆ ಯಶಸ್ಸು ಕೋರಿದರು.

ಖ್ಯಾತ ಮತ್ತು ನುರಿತ ವೈದ್ಯರುಗಳಾದ ಡಾ.ಈರಪ್ಪ, ವೈದ್ಯಕೀಯ ಶಾಸ್ತ್ರತಜ್ಞರು, ಡಾ. ಕಿಶೋರಿ, ಪ್ರಸೂತಿ ಮತ್ತು ಸ್ತ್ರೀ ಆರೋಗ್ಯ ತಜ್ಞರು, ಕೀಲು ಮತ್ತು ಮೂಳೆಶಾಸ್ತ್ರ ತಜ್ಞರಾದ ಡಾ. ವಿಶಾಲ್, ನರರೋಗ ಶಾಸ್ತ್ರ ತಜ್ಞರಾದ ಡಾ.ರವಿತೇಜ, ಪ್ರಯೋಗಾಲಯ ಮುಖ್ಯಸ್ಥೆ ಡಾ. ಸುಚೇತಾ ಶೆಟ್ಟಿ, ಕಿವಿ, ಮೂಗು, ಗಂಟಲು ತಜ್ಞರಾದ ಡಾ.ಜೆಶ್ವಿನ್ ಸಕ್ರಿಯವಾಗಿ ಭಾಗವಹಿಸಿ ಅಧಿಕ ರಕ್ತದೊತ್ತಡ, ಸಕ್ಕರೆ ಅಂಶ ಮೌಲ್ಯಮಾಪನವನ್ನು ನಡೆಸಿಕೊಟ್ಟರು ಮತ್ತು ಕಿವಿ, ಮೂಗು, ಗಂಟಲು ಪರೀಕ್ಷೆ, ಮಧುಮೇಹ ಪರೀಕ್ಷೆ, ನರರೋಗ ದೌರ್ಬಲ್ಯ, ನಿದ್ರಾಹೀನತೆ ಸಮಸ್ಯೆಗಳಿಗೆ ಸಲಹೆ ಮತ್ತು ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಸೇವನೆಯ ಬಗ್ಗೆ ಸಲಹೆ ನೀಡಿದರು.

ವೇದಿಕೆಯಲ್ಲಿ ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥರಾದ ಡಾ. ಸುಧಾಕರ್, ರೋಟರಿ ಸಂಸ್ಥೆಯ ವಲಯಾಧಿಕಾರಿಯಾದ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.

ಶಿಬಿರದ ಸಂಘಟಕರಾದ ಡಾ. ದೇವದಾಸ್ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಡಾ. ಜೂಲಿಯನ್ ಸಲ್ಡಾನ್ಹಾ ವಂದಿಸಿದರು. ಈ ಶಿಬಿರದಲ್ಲಿ ಸುಮಾರು 250 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

_Sathish Kapikad

Share.
Leave A Reply

Exit mobile version