ಮಂಗಳೂರು: ಈಶಿ ಪ್ರೊಡಕ್ಷನ್ ಲಾಂಛನದಲ್ಲಿ ಮನೋಹರ್ ರೈ ವೈಪಾಲ ನಿರ್ಮಾಣದಲ್ಲಿ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನದಲ್ಲಿ ತಯಾರಾದ “ಬನ” ತುಳುಚಲನ ಚಿತ್ರ ಅಕ್ಟೋಬರ್ 23 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ ಎಂದು ಚಲನ ಚಿತ್ರದ ನಿರ್ಮಾಪಕ ಮನೋಹರ್ ರೈ ಮತ್ತು ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

“ಬನ” ಸಿನಿಮಾ ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ, ಕಾರ್ಕಳ, ದೇರಳಕಟ್ಟೆ, ಪುತ್ತೂರು, ಸುಳ್ಯ, ಬೆಳ್ತಂಗಡಿ ಮೊದಲಾದ ಕಡೆಗಳಲ್ಲಿ ಬಿಡುಗಡೆಗೊಳ್ಳಲಿದೆ.

ಸಿನಿಮಾದ ಪ್ರೀಮಿಯರ್ ಶೋ ವೀಕ್ಷಿಸಿರುವ ಪ್ರೇಕ್ಷಕರು ಸಿನಿಮಾವನ್ನು ಮೆಚ್ಚಿ ಇಷ್ಟ ಪಟ್ಟಿದ್ದಾರೆ.

ಚಿತ್ರದಲ್ಲಿ ಖ್ಯಾತ ಪತ್ರಕರ್ತ ಜಯ ಪ್ರಕಾಶ್ ಶೆಟ್ಟಿ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ರೂಪ ವರ್ಕಾಡಿ ಪ್ರಮುಖ ಪಾತ್ರಗಳಲ್ಲಿ ಅಭುನಯಿಸಿದ್ದಾರೆ. ಜಯಪ್ರಕಾಶ್ ಶೆಟ್ಟಿ ಅವರ ಖಡಕ್ ಡೈಲಾಗ್ ಗಳು ಸಿನಿಮಾದ ಹೈಲೈಟ್ಸ್ ಆಗಿದೆ.

ನಾಯಕನಾಗಿ ನಿಹಾಲ್ ರೈ, ನಾಯಕಿಯಾಗಿ ಕೃತಿ ಶ್ರೀನಿವಾಸ್ ಪೂಜಾರಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ, ಶರತ್ ಆಳ್ವ, ಪ್ರೀಯ ಶೆಟ್ಟಿ, ವಿಜಯಹರಿ ರೈ, ವಿಕಾಸ್ ಪುತ್ರನ್, ನಿಜರೂಪ ಶೆಟ್ಟಿ, ಸವಿತಾ ಅಂಚನ್ , ಧನ್ಯ ಪೂಜಾರಿ,ಪ್ರವೀಣ್ ಕೊಡಕ್ಕಲ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಅರುಣ್ ರೈ ಪುತ್ತೂರು ಛಾಯಾಗ್ರಹಣ ಮಾಡಿದ್ದು ನವೀನ್ ನೇರಳ್ತೊಡಿ ಅವರ ಸಂಕಲನ ಚಿತ್ರಕ್ಕಿದೆ. ಖ್ಯಾತ ಸಂಗೀತ ನಿರ್ದೇಶಕ ಜಯಕಾರ್ತಿ ಅವರ ಸಂಗೀತ ಚಿತ್ರಕ್ಕಿದೆ.

“ಬನ” ಸಿನಿಮಾದ ಕುರಿತು ಪ್ರೇಕ್ಷಕರಿಗೆ ಬಾರೀ ಕುತೂಹಲ ಇದೆ. “ಬನ” ಸಿನಿಮಾದ ಟ್ರೇಲರ್ ನೋಡಿದ ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಉತ್ತಮ ಕಥೆಚಿತ್ರಕಥೆಯನ್ನು ಒಳಗೊಂಡ ಸಿನಿಮಾದಲ್ಲಿ ಸಮಾಜಕ್ಕೆ ಉತ್ತಮ ಸಂದೇಶದ ಜೊತೆಗೆ ಹಾಸ್ಯ, ಪ್ರೀತಿ, ಸಿಡುಕು, ಸೆಂಟಿಮೆಂಟ್ ಎಲ್ಲವೂ ಇದೆ. ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದೇವೆ ಎನ್ನುತ್ತಾರೆ ಸಿನಿಮಾದ ನಿರ್ದೇಶಕರು.

ಪತ್ರಿಕಾಗೋಷ್ಠಿಯಲ್ಲಿ ಜಯ ಪ್ರಕಾಶ್ ಶೆಟ್ಟಿ ಉಪ್ಪಳ, ಅರುಣ್ ರೈ ಪುತ್ತೂರು, ಕೃತಿ ಶ್ರೀನಿವಾಸ್ ಪೂಜಾರಿ, ನಿಹಾಲ್ ರೈ_ಸಬಿತಾ ಅಂಚನ್ , ಭವ್ಯಶ್ರಿ ಪೂಜಾರಿ ಉಪಸ್ಥಿತರಿದ್ದರು.

*ಆ್ಯಕ್ಷನ್‌, ಥ್ರಿಲ್ಲರ್‌, ಸಸ್ಪೆನ್ಸ್‌. ರೋಮ್ಯಾನ್ಸ್‌!

“ಬನ” ಸಿನಿಮಾದ ಟ್ರೇಲರ್‌ ಈಗ ಎಲ್ಲರಲ್ಲೂ ಹೊಸ ಕುತೂಹಲ, ನಿರೀಕ್ಷೆ ಮೂಡಿಸುತ್ತಿದೆ. ಕಾಡಿನಲ್ಲಿ ಕಂಡುಬಂದ ಮಗುವಿನ ಜತೆಗಿದ್ದವರು ಯಾರು, ಮನೆ ಮುಂದೆ ಹಾವು ಯಾಕೆ ಪ್ರತ್ಯಕ್ಷವಾಯಿತು, ಬನಕ್ಕೆ ಹಾನಿ ಮಾಡಿದವರನ್ನು ಕಾಡಲು ಬಂತೇ ನಾಗರಾಜ ಮುಂತಾದ ಹಲವಾರು ಪ್ರಶ್ನೆಗಳೊಂದಿಗೆ, ಈ ಸಿನಿಮಾದಲ್ಲಿ ಆ್ಯಕ್ಷನ್‌, ಥ್ರಿಲ್ಲರ್‌, ಸಸ್ಪೆನ್ಸ್‌. ರೋಮ್ಯಾನ್ಸ್‌ ಎಲ್ಲವೂ ಇರುವುದು ಖಚಿತವಾಗಿದೆ. ದೃಶ್ಯ ದೃಶ್ಯಗಳಲ್ಲೂ ಕೌತುಕಗಳು ಇರುವ ನಿರೀಕ್ಷೆಯನ್ನು ಈ ಟ್ರೇಲರ್‌ ಹುಟ್ಟುಹಾಕಿದೆ. ಜತೆಗೆ ನಮ್ಮ ಮಣ್ಣ್‌ದ ಕಥೆ ಎಂಬ ಟ್ಯಾಗ್‌ಲೈನ್‌, ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸಲಿರುವುದನ್ನು “ಬನ” ಸಿನಿಮಾ ಸ್ಪಷ್ಪಪಡಿಸುತ್ತದೆ.

*”ಬನ” ತುಳುನಾಡಿನ ನಂಬಿಕೆ ಪ್ರಕೃತಿ*

ಬನ… ಇದು ತುಳುನಾಡಿನ ನಂಬಿಕೆ, ಪ್ರಕೃತಿ, ಸಂಸ್ಕೃತಿಯನ್ನು ಬಿಂಬಿಸುವ ಒಂದು ಸಸ್ಪೆನ್ ಕಥೆಯುಳ್ಳ ಸಿನಿಮಾ. ಈಗಾಗಲೇ ಎರಡು ಸಿನಿಮಾಗಳನ್ನು ನೀಡಿರುವ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಅವರ ನಿರ್ದೇಶನದ ಬನ ಸಿನಿಮಾವು ಹಲವಾರು ಕಾರಣಗಳಿಂದ ಎಲ್ಲರಲ್ಲೂ ಭಾರೀ ಕುತೂಹಲ ಹಾಗೂ ನಿರೀಕ್ಷೆಗಳನ್ನು ಮೂಡಿಸುತ್ತಿದೆ.

ಈ ಸಿನಿಮಾದ ಟ್ರೇಲರ್‌ನಲ್ಲಿ ಕಾಣುವ ಕಾಡು, ಅದರ ನಿಗೂಢತೆ, ಮಗು… ಹೀಗೆ ಸಾಕಷ್ಟು ಸಸ್ಪೆನ್ಸ್ಗಳಿಗೆ ಕಾರಣವಾಗುತ್ತಿದೆ. ಹಿನ್ನೆಲೆ ಸಂಗೀತವಂತೂ ತುಂಬಾ ಖುಷಿಕೊಡುತ್ತಿದೆ.

ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಅವರಿಗೆ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಇದ್ದು, ಜತೆಗೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ರೂಪಾ ವರ್ಕಾಡಿ ಅವರೂ ಈ ಸಿನಿಮಾದಲ್ಲಿದ್ದಾರೆ.

ಅಕ್ಟೋಬರ್ 23ರಂದು ತೆರೆ ಕಾಣಲಿರುವ ಮುಂಬೈ ಮತ್ತು ಪುತ್ತೂರಿನ ಪ್ರೀಮಿಯರ್ ನಲ್ಲಿ ಜನರ ಅಭಿಪ್ರಾಯ ಗಮನಿಸುವಾಗ ಬನ ಸಿನಿಮಾವು ಈ ಹಿಂದಿನ ಹಲವು ಹಿಟ್ ತುಳು ಸಿನಿಮಾಗಳ ಸಾಲಿಗೆ ಸೇರುವ ಎಲ್ಲ ಸಾಧ್ಯತೆಗಳೂ ಇವೆ. ಅದರ ಟ್ಯಾಗ್‌ಲೈನ್ ನಮ್ಮ ಮಣ್ಣ್ದ ಕಥೆ ಹೆಚ್ಚು ಆಪ್ತವೆನಿಸುತ್ತದೆ.

*ನಾಗಬನ ಎಂದರೆ ಭಯಭಕ್ತಿ*

ಒಂದೇ ರೀತಿಯ ಸಿನಿಮಾ ನೋಡಿ ಬೇಸರ ಮಾಡಿಕೊಂಡಿರುವ ಪ್ರೇಕ್ಷಕರಿಗೆ ನಿರ್ದೇಶಕರು ಹೊಸ ರೀತಿಯ ಸಿನಿಮಾ ನೀಡುತ್ತಿದ್ದಾರೆ. ಸಂಸ್ಕೃತಿ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಇವರು ಈ ಹಿಂದೆ ಧರ್ಮಚಾವಡಿ, ಧರ್ಮದೈವ ಮುಂತಾದ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಈ ಬಾರಿ ಅದಕ್ಕಿಂತಲೂ ವಿಶೇಷತೆಯ ನಾಗಬನದ ಸಿನಿಮಾ ನೀಡುತ್ತಿರುವುದು ಗಮನಾರ್ಹ ಸಂಗತಿ. ನಾಗಬನ ಎಂದು ಹೇಳಿದ ಕೂಡಲೇ ನಮಗೆ ಭಯಭಕ್ತಿ ಎಲ್ಲವೂ ಬರುತ್ತದೆ. ಅಂಥ ನಾಗಬನಕ್ಕೆ ಸಂಬಂಧಿಸಿ ಒಂದು ಸುಂದರ ಕಥೆಯನ್ನು ಸಿದ್ಧಪಡಿಸಿ, ಒಂದು ವರ್ಷದ ಸಿದ್ಧತೆಯೊಂದಿಗೆ ಮೂಡಿ ಬರುತ್ತಿರುವ ಈ ಸಿನಿಮಾವು ಎಲ್ಲರ ಮನಗೆಲ್ಲುವ ನಿರೀಕ್ಷೆ ಇದ್ದೇ ಇದೆ ಎನ್ನುತ್ತಾರೆ ಸಿನಿಮಾದ ನಿರ್ಮಾಪಕರು.

_Sathish Kapikad 

Share.
Leave A Reply

Exit mobile version