
ರಾಜೇಶ್ ಡಿ’ಸಿಲ್ವ
ಮಂಗಳೂರು: ಕೆಲವು ದಿನಗಳ ಹಿಂದೆ ಎಂ ಆರ್ ಪಿ ಎಲ್ ನಲ್ಲಿ ನಡೆದ ಸ್ಪೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸುರತ್ಕಲ್ ನ ಗುತ್ತಿಗೆ ಕಾರ್ಮಿಕ ರಾಜೇಶ್ ಡಿ’ಸಿಲ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆ ಮೂಲಕ ಮಂಗಳೂರನ್ನೆ ನಡುಗಿಸಿದ್ದ MRPL ಸ್ಪೋಟಕ್ಕೆ ಬಲಿಯಾದ ಕಾರ್ಮಿಕರ ಸಂಖ್ಯೆ ಎರಡಕ್ಕೆ ಏರಿದೆ.
MRPL ನ ಹೊಣೆಗೇಡಿತನ, ಸುರಕ್ಷತಾ ವೈಫಲ್ಯಕ್ಕೆ ಯುವಕ ರಾಜೇಶ್ ಡಿ ಸಿಲ್ವ ಬಲಿಯಾಗಿದ್ದಾರೆ. ಮನೀಶ್ ಕರ್ಕಡ ಕುಟುಂಬಕ್ಕೆ ನೀಡಿದಂತೆ ರಾಜೇಶ್ ಕುಟುಂಬಕ್ಕೂ ಒಂದು ಕೋಟಿ 20 ಲಕ್ಷ ರೂಪಾಯಿ ಪರಿಹಾರ ಧನವನ್ನು MRPL ಆಡಳಿತ ನೀಡಬೇಕು. ದುರಂತಕ್ಕೆ ಕಾರಣವಾದ ಅಂಶಗಳ ಪ್ರಾಥಮಿಕ ತನಿಖಾ ವರದಿಯನ್ನು ಬಹಿರಂಗ ಪಡಿಸಬೇಕು. ನಾಗರಿಕ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯಿಂದ ಸ್ಪೋಟದ ಕುರಿತಾಗಿ ತನಿಖೆ ನಡೆಸಬೇಕು. ರಾಜೇಶ್ ಡಿ ಸಿಲ್ವ, ಹಾಗು ಮನೀಶ್ ಕರ್ಕಡ ಕುಟುಂಬದ ಸದಸ್ಯರಿಗೆ MRPL ನಲ್ಲಿ ನೇರ ಉದ್ಯೋಗ ಕಲ್ಪಿಸಬೇಕು, ಸ್ಪೋಟದ ತೀವ್ರತೆಗೆ ಹಾನಿಗೊಂಡಿರುವ ಸುತ್ತಲ ಗ್ರಾಮಸ್ಥರ ಆಸ್ತಿಪಾಸ್ತಿಗಳಿಗೆ ನ್ಯಾಯಯುತ ಪರಿಹಾರವನ್ನು ಶೀಘ್ರದಲ್ಲಿ ವಿತರಿಸಬೇಕು ಎಂದು ಸಿಪಿಐಎಂ ಆಗ್ರಹಿಸುತ್ತದೆ ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಬಹಳ ಪ್ರಮುಖವಾಗಿ ಮಂಗಳೂರಿನ ಧಾರಣಾ ಸಾಮರ್ಥ್ಯ, ಸುತ್ತಲಿನ ದಟ್ಟ ಜನವಸತಿಯನ್ನು ಪರಿಗಣಿಸಿ MRPL ನ ನಾಲ್ಕನೇ ಹಂತದ ವಿಸ್ತರಣಾ ಯೋಜನೆಯನ್ನು ಸರಕಾರ ಕೈ ಬಿಡಬೇಕು ಎಂದು ಸಿಪಿಐಎಂ ಒತ್ತಾಯಿಸುತ್ತದೆ ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
_Sathish Kapikad


