ಮಂಗಳೂರು, ಮೇ. 29: ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯ ಮಧ್ಯೆ ಸಾರ್ವಜನಿಕರ ಜೀವಕ್ಕೆ ಅಪತ್ತು ತಂದೊಡ್ಡುವ ಘಟನೆಯೊಂದು ಕುಂಟಿಕಾನ್ ಬಳಿ ಇಂದು ನಡೆದಿದೆ, ಸರ್ವೀಸ್ ರಸ್ತೆಯ ಮಧ್ಯೆ ನೀರು ಹರಿದು ಹೋಗುವ ಚರಂಡಿಗೆ ಹಾಕಲಾಗಿದ್ದ ಸಿಮೆಂಟ್ ಸ್ಲ್ಯಾಬ್ ಗಳು ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಕುಂಟಿಕಾನ್ ಜಂಕ್ಷನ್ ನಿಂದ ಕೊಟ್ಟಾರ ಕಡೆ ಹೋಗುವ ಸರ್ವಿಸ್ ರಸ್ತೆ ಮಧ್ಯೆ ನೀರು ಹೋಗುವ ಚರಂಡಿ ಮೇಲೆ ಹಾಕಿರುವ ಕಾಂಕ್ರಿಟ್ ಸ್ಲ್ಯಾಬ್ ಗಳು ಕುಸಿದು ಬಿದ್ದಿದ್ದು, ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಮುಂಜಾನೆ ಸ್ವಲ್ಪ ಕುಸಿದಿದ್ದ ಈ ರಸ್ತೆ ಮಧ್ಯಾಹ್ನ ಸಂಪೂರ್ಣ ಕುಸಿದು ಬಿದ್ದಿದ್ದು, .ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳು ತಕ್ಷಣ ಈ ಬಗ್ಗೆ ಗಮನ ಹರಿಸಿ, ವಾಹನ ಸವಾರರ ಜೀವ ಉಳಿಸಬೇಕೆಂದು ಸ್ಥಳೀಯರು ಅಗ್ರಹಿಸಿದ್ದಾರೆ.

ಕುಂಟಿಕಾನ್ ಡಿ ಮಾರ್ಟ್ ಹಾಗೂ ಬಿ.ಎಂ.ಎಸ್ ಹೋಟೆಲ್ ಮುಂಭಾಗದ ಸರ್ವೀಸ್ ರಸ್ತೆಯ ಮಧ್ಯೆ ಈ ಅಪಾಯಕಾರಿ ಕಂದಕ ಸೃಷ್ಠಿಯಾಗಿದೆ. ಕಳೆದ ಎರಡು ವಾರಗಳಿಂದ ಸ್ವಲ್ಪ ಪ್ರಮಾಣದಲ್ಲಿ ಕುಸುದಿದ್ದ ಈ ಸ್ಲ್ಯಾಬ್ ಇಂದು ಮಧ್ಯಾಹ್ನ ವೇಳೆ ವಾಹನಗಳ ಸಂಚಾರದ ಒತ್ತಾಡಕ್ಕೆ ಸಿಲುಕಿ ಸಂಪೂರ್ಣ ಕುಸಿದು ಬಿದ್ದಿದ್ದು, ರಸ್ತೆ ಮಧ್ಯೆ ದೊಡ್ಡ ಕಂದಕ ನಿರ್ಮಾಣವಾಗಿದೆ.
ಇದೀಗ ರಾತ್ರಿ ವೇಳೆ ಈ ರಸ್ತೆ ಮೂಲಕ ಸಂಚಾರಿಸುವ ವಾಹನ ಸವಾರರಿಗೆ ಇದು ಕಾಣದೆ ಅನಾಹುತ ಸಂಭವಿಸುವ ಭೀತಿ ಎದುರಾಗಿದೆ.

ವಾಹನ ದಟ್ಟಣೆ ಇರುವ ಈ ರಸ್ತೆ ಹಲವು ದಿನಗಳಿಂದ ಕುಸಿದು ಬಿದ್ದಿದ್ದರೂ ಸಂಬಂಧಪಟ್ಟ ಇಲಾಖೆಯಾಗಲಿ ಅಥವಾ ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರದ ಅಧಿಕಾರಿಗಳಾಗಲಿ ಈ ಬಗ್ಗೆ ಗಮನ ಹರಿಸದಿರುವುದಕ್ಕೆ ಸ್ಥಳೀಯರು ಹಾಗೂ ವಾಹನ ಸವಾರರು ತೀವ್ರ ಅಕ್ರೋಷ ವ್ಯಕ್ತಪಡಿಸಿದ್ದಾರೆ.
ಕೂಡಲೇ ಈ ರಸ್ತೆಯ ದುರಸ್ತಿ ನಡೆಸದಿದ್ದಾರೆ ವಾಹನ ಸವಾವರರಿಗೆ ಅಪಾಯ ಖಂಡಿತ. ಜೀವಹಾನಿ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಈ ರಸ್ತೆಯ ದುರಸ್ತಿ ಕಾರ್ಯವನ್ನು ಕುಡಲೇ ಕೈಗೊಂಡು ವಾಹನ ಸವಾರರ ಜೀವವನ್ನು ರಕ್ಷಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
__ Sathish Kapikad

