ಮಂಗಳೂರು, ನ.23(ಕ.ವಾ):- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಸೋಮವಾರ ಮಂಗಳೂರು ನಗರದ ಲಾಲ್ ಬಾಗ್, ಪಂಪ್‍ವೆಲ್ ಮತ್ತಿತ್ತರ ಕಡೆ ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಿದ್ದ ವ್ಯಕ್ತಿಗಳಿಗೆ ತಿಳುವಳಿಕೆ ನೀಡಿ ದಂಡ ವಿಧಿಸಲಾಯಿತು.

ಅಂಗಡಿಯ ಮಾಲಕರಿಗೂ ಸಹ ಸಿಂಗಲ್ ಬಿಡಿ ಬಿಡಿ ಮಾರಾಟ ಮಾಡಬಾರದೆಂದು ಎಚ್ಚರಿಸಲಾಯಿತು. ತಂಬಾಕು ನಿಯಂತ್ರಣ ಕಾಯ್ದೆ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಕೇವಲ ಬಿಡಿ ಸಿಗರೇಟ್ ಮಾತ್ರವಲ್ಲದೆ ತಂಬಾಕು ಉತ್ಪನ್ನಗಳನ್ನು ಸೇವಿಸುವುದು ಸಹ ನಿಶೇಧಿಸಲಾಗಿದೆ. ಉಲ್ಲಂಘನೆಗೆ 1000 ರೂ. ದಂಡ ವಿಧಿಸಲಾಗುವುದು.

21 ವರ್ಷದ ಒಳಗಿನ ಮಕ್ಕಳು ಸಹ ತಂಬಾಕು ಉತ್ಪನ್ನ ಬಳಸುವುದು ಹಾಗೂ ಸಾಗಾಟ ಮಾಡುವುದು ಸಹ ಅಪರಾಧವಾಗಿರುತ್ತದೆ ಶಾಲಾ ಕಾಲೇಜುಗಳ 100 ಮೀಟರ್ ಅಂತರದೊಳಗೆ ಯಾವುದೇ ರೀತಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಮತ್ತು ಸೇವನೆ ಮಾಡುವುದು ಸಹ ಅಪರಾಧವಾಗಿರುತ್ತದೆ. ಉಲ್ಲಂಘನೆಗೆ ರೂ.1 ಸಾವಿರದವರೆಗೆ ದಂಡ ವಿಧಿಸಬಹುದಾಗಿದೆ.

ಭಾರತ ಸರ್ಕಾರದ ಆದೇಶದಂತೆ ತಂಬಾಕು ಮುಕ್ತ ಯುವ ಅಭಿಯಾನ ಪ್ರಾರಂಭವಾಗಿರುತ್ತದೆ. ಇದರ ಮುಖ್ಯ ಉದ್ದೇಶ ಯುವ ಜನತೆಯನ್ನು ತಂಬಾಕಿನ ದುಷ್ಪರಿಣಾಮಗಳಿಂದ ತಡೆಯುವುದಾಗಿರುತ್ತದೆ. ಹೀಗಾಗಿ ಎಲ್ಲ ಮಕ್ಕಳು ವಿದ್ಯಾರ್ಥಿಗಳು ಯುವ ಜನತೆ ತಂಬಾಕಿನ ಉತ್ಪನ್ನಗಳಿಂದ ದೂರವಿರಬೇಕು.

ಕಾರ್ಯಾಚರಣೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಅಧಿಕಾರಿ ಡಾ.ನವೀನ್ ಚಂದ್ರ ಕುಲಾಲ್ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿಗಳು ಹಾಜರಿದ್ದರು.

Sathish Kapikad

Share.
Leave A Reply

Exit mobile version