
ಎಳವೆಯಿಂದಲೂ ನಾಟಕ ನೋಡುವುದೆಂದರೆ ನನಗೆ ಬಹಳ ಅಚ್ಚು ಮೆಚ್ಚು. 1990ರ ಹೊತ್ತಿನಲ್ಲಿ ನಮ್ಮೂರಿನ ಸುತ್ತಮುತ್ತ ಯಕ್ಷಗಾನ ಪ್ರದರ್ಶನಗಳೇ ಹೆಚ್ಚು ನಡೆಯುತ್ತಿದ್ದವು. ನಮ್ಮ ಹಳ್ಳಿಯ ಪಕ್ಕದ ಊರಾದ ಸಿದ್ದಕಟ್ಟೆಯಲ್ಲಿ ವರ್ಷಕ್ಕೆ ಒಂದೆರಡು ಬಾರಿ ಟಿಕೇಟಿನ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ದೊಡ್ಡ ಮೈಕಾಸುರನನ್ನು ಹೊತ್ತ ರಿಕ್ಷಾ ನಮ್ಮೂರೆಲ್ಲ ಸುತ್ತಾಡಿ ಈ ಸುದ್ದಿಯನ್ನು ಮನೆ ಮನೆಗೂ ತಲುಪಿಸುವ ಕಾರ್ಯವನ್ನು ಮಾಡುತ್ತಿತ್ತು. ಆ ಧ್ವನಿಯನ್ನು ನಾವೆಲ್ಲ ಕಿವಿನಿಮಿರಿಸಿಕೊಂಡು ಕೇಳುತ್ತಿದ್ದೆವು.
ನಮ್ಮೂರಲ್ಲಿ ಸಂಜೆ ಏಳರ ನಂತರ ವಾಹನ ಸಂಚಾರವಿರದ ಕಾಲವದು. ಸುಮಾರು ಐದಾರು ಕಿಲೋಮೀಟರ್ ದೂರ ನಡೆದುಕೊಂಡೇ ಹೋಗಿ ಯಕ್ಷಗಾನ ಮತ್ತು ನಾಟಕವನ್ನು ನೋಡಬೇಕಾದ ಪರಿಸ್ಥಿತಿ ಅಂದಿನದು. ಯಕ್ಷಗಾನ ಬೆಳಗಾತದವರೆಗೂ ಇರುತ್ತಿತ್ತು. ಆದರೆ ನಾಟಕ ನಡುರಾತ್ರಿ ಮುಗಿಯುವುದರಿಂದ ಮನೆಯಲ್ಲಿ ಹೆಣ್ಣುಮಕ್ಕಳನ್ನು ಕರೆದುಕೊಂಡು ಹೋಗುತ್ತಿರಲಿಲ್ಲ. ನಾನು ಒಂದೆರಡು ಬಾರಿ ಸೋದರಮಾವನಲ್ಲಿ ಅತ್ತು ಕರೆದು ನಾಟಕಕ್ಕೆ ಹೋಗಿ ಬಂದಿದ್ದುಂಟು.
ಮದುವೆಯಾಗಿ ಮುಂಬೈಗೆ ಬಂದ ಮೇಲೂ ನಾಟಕ ನೋಡುವಂಥ ಅವಕಾಶ ಸಿಕ್ಕಿದರೆ ಯಾವತ್ತು ಕಳೆದುಕೊಳ್ಳುತ್ತಿರಲಿಲ್ಲ. ಊರಿನ ತಂಡ ಮುಂಬಯಿಗೆ ಬಂದರೆ ನಮ್ಮೂರೇ ನಗರಕ್ಕೆ ಬಂದಿದೆಯೆಂಬ ಖುಷಿ. ನವೀನ್ ಡಿ ಪಡೀಲ್, ದೇವದಾಸ್ ಕಾಪಿಕಾಡ್ ಅವರ ಕೆಲವು ನಾಟಕಗಳನ್ನು ಮುಂಬಯಿಯಲ್ಲಿ ನೋಡಿದ್ದೆ. ಆದರೆ ಒಂದೇ ನಾಟಕವನ್ನು ಎರಡುಬಾರಿ ನೋಡಿದ್ದು, ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರ ನಿರ್ದೇಶನದ ‘ಶಿವಧೂತ ಗುಳಿಗ’ ಮಾತ್ರ.
ಎರಡು ವರ್ಷದ ಮುಂಚೆ ಮಗಳೊಂದಿಗೆ ನಾಟಕ ನೋಡಿದ ಮೇಲೆ ಈ ನಾಟಕವನ್ನು ನನ್ನಮ್ಮನಿಗೂ ತೋರಿಸಬೇಕೆಂಬ ಆಸೆ ನನಗಿತ್ತು. ಈ ಬಾರಿ ಅಮ್ಮನೂ ಮುಂಬಯಿಯಲ್ಲಿದ್ದರು. ನಾಟಕ ತಂಡವೂ ನಗರಕ್ಕೆ ಬಂದಿತ್ತು. ಅಮ್ಮನ ಜೊತೆಯಲ್ಲಿ ಕುರ್ಲಾ ಬಂಟರಭವನದಲ್ಲಿ ನಡೆದ ನಾಟಕವನ್ನು ನೋಡಲು ಆ ಮೊದಲಿನ ಹುಮ್ಮಸ್ಸಿನಿಂದಲೇ ಹೋಗಿದ್ದೆ. ಸಮಯಕ್ಕೆ ಸರಿಯಾಗಿ ನಾಟಕವೂ ಆರಂಭಗೊಂಡಿತ್ತು. ವಿಶಿಷ್ಟ ತಂತ್ರಜ್ಞಾನವನ್ನು ಬಳಸಿಕೊಂಡು ವಿನೂತನ ರಂಗ ವಿನ್ಯಾಸ ಮತ್ತು ಪ್ರಯೋಗದೊಂದಿಗೆ ಶಿವಧೂತ ಗುಳಿಗನ ಮಹಿಮೆಯನ್ನು ಸಾರುವ ಭಕ್ತಿ ಪ್ರಧಾನವಾದ ಒಂದು ನಾಟಕವನ್ನು ಯಶಸ್ವಿಯಾಗಿ ನಿರ್ದೇಶಿಸಿದ ಹಿರಿಮೆ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರದ್ದು.
ನಾಟಕವು ಕೇವಲ ಒಂದು ಕಥೆಯನ್ನು ಹೇಳುವ ಮಾಧ್ಯಮವಲ್ಲ. ಅದು ಪ್ರೇಕ್ಷಕರ ಮನಸ್ಸಿನಲ್ಲಿ ಭಾವಾನುಭವನ್ನು ಉಂಟುಮಾಡುವ ಕಲಾಪ್ರಕಾರವಾಗಿದೆ. ಭಾವಗಳನ್ನು ಅನುಭಾವಗಳನ್ನಾಗಿ ಪರಿವರ್ತಿಸುವುದು ರಸನಿಷ್ಪತ್ತಿ. ರಸವೆಂದರೆ ನಾಟಕವನ್ನು ನೋಡುವಾಗ ಪ್ರೇಕ್ಷಕನಿಗೆ ಉಂಟಾಗುವ ವಿಶೇಷವಾದ ಅನುಭೂತಿಯಾಗಿದೆ.
ಭಾರತೀಯ ಕಾವ್ಯಮೀಮಾಂಸೆಯಲ್ಲಿ ರಸಸಿದ್ಧಾಂತಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಭರತಮುನಿಯ ನಾಟ್ಯಶಾಸ್ತ್ರ ರಸಸಿದ್ಧಾಂತದ ಮೂಲ ಆಕರಗಳಲ್ಲಿ ಪ್ರಮುಖವಾದುದು. “ವಿಭಾವಾನುಭಾವವ್ಯಭಿಚಾರಿಸಂಯೋಗಾದ್ ರಸನಿಷ್ಪತ್ತಿಃ” ಭರತಮುನಿಯ ಪ್ರಸಿದ್ಧ ಸೂತ್ರವಾಗಿದೆ. ವಿಭಾವ, ಅನುಭಾವ ಮತ್ತು ವ್ಯಭಿಚಾರಿ ಭಾವಗಳ ಸಂಯೋಗದಿಂದ ರಸವು ಉತ್ಪತ್ತಿಯಾಗುತ್ತದೆ ಎಂಬರ್ಥವನ್ನು ಈ ಸೂತ್ರವು ಸೂಚಿಸುತ್ತದೆ.
ಭರತಮುನಿಯ ನಾಟ್ಯಶಾಸ್ತ್ರದಲ್ಲಿ ನಾಟಕದ ಕಲಾತ್ಮಕ ಪರಿಣಾಮವನ್ನು ರಸಾನುಭವದ ಮೂಲಕವೇ ಗ್ರಹಿಸುವ ದೃಷ್ಟಿಕೋನವಿದೆ. ನಾಟಕದಲ್ಲಿ ಸಂಭಾಷಣೆ, ಅಭಿನಯ, ಆಂಗಿಕ ಚಲನೆ, ಸಂಗೀತ, ಬೆಳಕಿನ ವಿನ್ಯಾಸ, ವೇಷಭೂಷಣ ಮತ್ತು ರಂಗಸಜ್ಜಿಕೆ ಇವೆಲ್ಲವೂ ರಸನಿಷ್ಪತ್ತಿಗೆ ಪೂರಕವಾಗುತ್ತವೆ.
ಶಿವಧೂತ ಗುಳಿಗ ನಾಟಕದಲ್ಲಿಯೂ ರೌದ್ರ ವೀರ ಭಯಾನಕ ಅಧ್ಬುತ ರಸಾನುಭವಗಳು ವೇದ್ಯವಾಗುತ್ತವೆ. ಅನ್ಯಾಯ, ಅಧರ್ಮ, ದುಷ್ಟಶಕ್ತಿಗಳ ವಿರುದ್ಧ ವ್ಯಕ್ತವಾಗುವ ಆಕ್ರೋಶ ಮತ್ತು ಉಗ್ರಭಾವಗಳಿವೆ. ಇದು ರೌದ್ರ ರಸಕ್ಕೆ ಕಾರಣವಾಗುತ್ತವೆ. ಧರ್ಮರಕ್ಷಣೆ, ದುಷ್ಟರ ಸಂಹಾರ, ಧೈರ್ಯ ಮತ್ತು ಸಾಹಸವನ್ನು ಅಭಿವ್ಯಕ್ತಿಸುವ ವೀರ ರಸವಿದೆ.
ನಾಟಕ ನೋಡುತ್ತಿದ್ದಂತೆ ಪವಾಡದಂತೆ ಕಾಣಿಸಿಕೊಂಡು ಸೋಜಿಗಗೊಳಿಸುವಂತ ಸನ್ನಿವೇಶಗಳು ವಿಸ್ಮಯವನ್ನು ಮೂಡಿಸಿ ಅದ್ಭುತ ರಸಕ್ಕೆ ಕಾರಣವಾಗಿವೆ. ಈ ನಾಟಕದಲ್ಲಿ ಗುಳಿಗನ ಪಾತ್ರಾಭಿನಯ ಇದಕ್ಕೆ ಅನ್ವಯವಾಗುತ್ತದೆ. ಇಲ್ಲಿ ಕಂಡುಬರುವ ಪವಾಡಗಳು ಪ್ರೇಕ್ಷಕರನ್ನು ಬೆರಗುಗೊಳಿಸುತ್ತವೆ.
ತಾನು ಹಡೆದ ಇಪ್ಪತ್ತಮೂರು ಮಕ್ಕಳನ್ನು ಕೊಂದು ತಿಂದಂಥ ರಾಕ್ಷಸಿ ನೆಲವುಲ್ಲ ಸಂಕೆಯ ಉಗ್ರ ಸ್ವರೂಪ, ರಂಗದ ವಾತಾವರಣ, ಧ್ವನಿ ಮತ್ತು ಬೆಳಕಿನ ಬಳಕೆ ಭಯದ ಅನುಭವವನ್ನು ಉಂಟುಮಾಡುವಂತಿದೆ. ದೈವಿಕ ಶಕ್ತಿಯ ಮೇಲಿನ ಶ್ರದ್ಧೆ, ನಂಬಿಕೆ, ಶರಣಾಗತಿ ಮತ್ತು ಆರಾಧನೆಯ ಭಾವ ಭಕ್ತಿಯ ಅನುಭವವನ್ನು ನೀಡುವಂಥ ಭಕ್ತಿರಸವೂ ಇದೆ. (ಶಾಸ್ತ್ರೀಯ ನವರಸಗಳ ಪಟ್ಟಿಯಲ್ಲಿ ಮೂಲ ನವರಸಗಳಲ್ಲಿ ಭಕ್ತಿರಸವು ಸೇರಿಲ್ಲವಾದರೂ ಭಕ್ತಿಪರಂಪರೆಯಲ್ಲಿ ಭಕ್ತಿಯನ್ನು ಸ್ವತಂತ್ರ ರಸವಾಗಿ ಚರ್ಚಿಸಲಾಗಿದೆ.)
ಒಂದು ನಾಟಕದ ಯಶಸ್ಸು ಅದರ ಕಥಾವಸ್ತುವಿನಲ್ಲಷ್ಟೇ ಅಡಕವಾಗಿರುವುದಿಲ್ಲ. ಅದು ಪ್ರೇಕ್ಷಕರ ಮನಸ್ಸಿನಲ್ಲಿ ಉಂಟುಮಾಡುವ ಭಾವಸಂವೇದನೆಯಲ್ಲಿಯೂ ನೆಲೆಗೊಂಡಿರುತ್ತದೆ. ಭಾರತೀಯ ಕಾವ್ಯಮೀಮಾಂಸೆಯ ರಸಸಿದ್ಧಾಂತದ ಹಿನ್ನೆಲೆಯಲ್ಲಿ ಗಮನಿಸಿದಾಗ, ‘ಶಿವಧೂತ ಗುಳಿಗ’ ನಾಟಕವು ರೌದ್ರ, ವೀರ, ಅದ್ಭುತ ಭಯಾನಕ ಹಾಗೂ ಭಕ್ತಿಭಾವಗಳ ವಿವಿಧ ಅಭಿವ್ಯಕ್ತಿಗಳಿಗೆ ಅವಕಾಶ ಕಲ್ಪಿಸುತ್ತದೆ. ಈ ಭಾವಗಳ ಸಮರ್ಥ ರಂಗಾಭಿವ್ಯಕ್ತಿ ನಾಟಕದ ಪರಿಣಾಮಕಾರಿತ್ವವನ್ನು ಹೆಚ್ಚಿಸಿದೆ.
ಶಿವಧೂತ ಗುಳಿಗ ನಾಟಕದಲ್ಲಿ ಬಹಳ ಕಾಡುವಂಥ ಮತ್ತು ರೋಮಾಂಚನಗೊಳಿಸುವಂಥ ಪಾತ್ರ ಶಿವಧೂತ ಗುಳಿಗನದು. ಇಡೀ ನಾಟಕದುದ್ದಕ್ಕೂ ಆವೇಶಭರಿತನಾಗಿಯೇ ಅಭಿನಯಿಸುವುದು ಸುಲಭಸಾಧ್ಯವಲ್ಲ. ಇಲ್ಲಿ ಗುಳಿಗನಾಗಿ ಅಭಿನಯಿಸಿದ ಮೂವರೂ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ನೆಲವುಲ್ಲ ಸಂಕೆಯ ಗರ್ಭದಿಂದ ಹೊರಬಂದ ನಂತರದ ಗುಳಿಗನ ಪಾತ್ರದಲ್ಲಿ ಅಭಿನಯಿಸುವವನು ನಿಜಕ್ಕೂ ಶಕ್ತಿಶಾಲಿಯಾಗಿರಬೇಕು.
ಎರಡು ವರ್ಷದ ಮೊದಲು ನೋಡಿದ ನಾಟಕದಲ್ಲಿ ಈ ಪಾತ್ರವನ್ನು ಸ್ವರಾಜ್ ಶೆಟ್ಟಿ, ಈ ಬಾರಿ ಪ್ರೀತೇಶ್ ಬಲ್ಲಾಳ್ಭಾಗ್ ನಿರ್ವಹಿಸಿದ್ದಾರೆ. ಇಬ್ಬರೂ ಬಹಳ ಎನರ್ಜಿಟಿಕ್ ಆಗಿ ಅಭಿನಯಿಸಿ ಪ್ರೇಕ್ಷಕರ ಮನಸ್ಸನ್ನು ಗೆದ್ದು ಭಕ್ತಿಭಾವಗಳನ್ನು ಮೂಡಿಸಿದ್ದಾರೆ.
ನೆಲವುಲ್ಲ ಸಂಕೆ ಒಂದೇ ದೃಶ್ಯದಲ್ಲಿ ಕಾಣಿಸಿಕೊಳ್ಳುವುದಾದರೂ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಬಿಡುವಂತಹ ಪಾತ್ರವಾಗಿದೆ. ಒಂದು ಕೋಮಲವಾದ ಹೆಣ್ಣು ತನ್ನ ಮೂಲಗುಣವನ್ನು ಮರೆತು ರಾಕ್ಷಸತನವನ್ನು ತನ್ನೊಳಗೆ ಆವಾಹಿಸಿಕೊಂಡು ಅಭಿನಯ ಮಾಡುವುದು ಕಷ್ಟ. ರೋಷವುಕ್ಕಿಸುವಂಥ ನೋಟ, ಅಟ್ಟಹಾಸ, ಗಂಭೀರವಾದ ಹಾವಭಾವದೊಂದಿಗೆ ಈ ಪಾತ್ರವನ್ನು ಭಿನ್ನವಾಗಿ, ಪರಿಪಕ್ವವಾಗಿ ನಿರ್ವಹಿಸಿದ ರೂಪಶ್ರೀ ವರ್ಕಾಡಿಯವರ ಅಭಿನಯ ನಿಜಕ್ಕೂ ಮೆಚ್ಚುವಂಥದ್ದು.
ಇಷ್ಟಲ್ಲದೆ ಶಿವ, ಪಾರ್ವತಿ(ಸುಬ್ಬಿ), ವಿಷ್ಣು, ಲಕ್ಷ್ಮೀ ಸಹಿತ ಎಲ್ಲ ಪಾತ್ರಧಾರಿಗಳ ಪ್ರಬುದ್ಧವಾದ ಅಭಿನಯ ರಂಗವೇದಿಕೆಯನ್ನು ಶ್ರೀಮಂತಗೊಳಿಸಿದೆ. ಒಂದು ಸಿನೆಮಾ ತೆರೆ ಕಾಣುವ ಮೊದಲು ಎಡಿಟಿಂಗ್ ಮಾಡುವ ಅವಕಾಶಗಳು ಇರುತ್ತವೆ. ಆದರೆ ನಾಟಕ ಹಾಗಲ್ಲ. ರಂಗವೇದಿಕೆಯಲ್ಲಿ ಒಂದು ಕ್ಷಣ ಎಡವಿದರೂ ಅದು ದೊಡ್ಡ ತಪ್ಪುಗಳಾಗಿ ಗೋಚರಿಸಿ ಬಿಡುವುದು. ಹೀಗಾಗಿ ನಾಟಕ ಮುಗಿಯುವವರೆಗೆ ನಟರು ಸೇರಿದಂತೆ ಪರದೆಯ ಹಿಂದೆ ಸಹಕರಿಸುವ ಎಲ್ಲರೂ ಮೈಯೆಲ್ಲ ಕಣ್ಣಾಗಿರಿಸಿ ಕೆಲಸ ಮಾಡಬೇಕಾಗುತ್ತದೆ.
ಈ ನಾಟಕದ ವೈಶಿಷ್ಟ್ಯವೇನೆಂದರೆ ಎಷ್ಟು ಬಾರಿ ನೋಡಿದರೂ ಅದೇ ಕುತೂಹಲ ಅದೇ ಆಸಕ್ತಿ ನಮ್ಮಲ್ಲಿ ಸ್ಥಾಯಿಯಾಗಿರುವುದು. ಎರಡು ವರ್ಷದ ಹಿಂದೆ ನೋಡಿದ ಶಿವಧೂತ ಗುಳಿಗ, ಮೊನ್ನೆ ನೋಡಿದ ಶಿವಧೂತ ಗುಳಿಗ ನಾಟಕದಲ್ಲಿ ಸಕಾರಾತ್ಮಕವಾದ ಕೆಲವೊಂದು ಬದಲಾವಣೆಗಳಾಗಿದ್ದು ಹೊಸತನದಿಂದ ಕೂಡಿತ್ತು.
ಒಂದು ನಾಟಕ ಯಶಸ್ವಿಯಾದ ಮಾತ್ರಕ್ಕೆ ಅದೇ ಅಂತಿಮವೆಂದು ಭಾವಿಸದೆ ಇನ್ನಷ್ಟು ಉತ್ತಮವಾಗಿ ಮೂಡಿಬರಬೇಕೆನ್ನುವ ನಿರ್ದೇಶಕರ ಕಾಳಜಿ, ರಂಗದ ಮೇಲಿನ ಪ್ರೀತಿ ಪ್ರಶಂಸನೀಯವಾದುದು. ಒಟ್ಟಿನಲ್ಲಿ ವಿಜಯಕುಮಾರ್ ಕೊಡಿಯಾಲ್ಬೈಲ್ ಅವರ ‘ಶಿವಧೂತ ಗುಳಿಗ’ ನಾಟಕವು ತುಳುನಾಡಿನ ದೈವಾರಾಧನೆ, ಜನಪದ ಸಂಸ್ಕೃತಿ, ಸಾಮಾಜಿಕ ಬದುಕು ಮತ್ತು ರಂಗಭೂಮಿಯ ಅಭಿವ್ಯಕ್ತಿಯ ನೆಲೆಯಲ್ಲಿ ಬಹಳ ಅರ್ಥಪೂರ್ಣವಾಗಿ ಮೂಡಿಬಂದಿದೆ.
ತುಳುನಾಡು ತನ್ನ ಆಚಾರ-ವಿಚಾರ, ಸಂಪ್ರದಾಯ, ದೈವಾರಾಧನೆ ಮತ್ತು ಜನಪದೀಯ ನಡಾವಳಿಗಳ ಮೂಲಕ ಸಾಂಸ್ಕೃತಿಕ ಅಸ್ಮಿತೆಯನ್ನು ಹೊಂದಿರುವ ನೆಲ. ಇಲ್ಲಿನ ದೈವಾರಾಧನೆ ಕೇವಲ ಧಾರ್ಮಿಕ ಆಚರಣೆಯಾಗಿರದೆ, ಜನಜೀವನದ ನಂಬಿಕೆ, ನ್ಯಾಯನಿಷ್ಠೆ ಸಾಮಾಜಿಕ ಸಂಬಂಧ ಹಾಗೂ ಸಾಂಸ್ಕೃತಿಕ ಪರಂಪರೆಯ ಜೀವಂತ ಅಭಿವ್ಯಕ್ತಿಯಾಗಿದೆ.
ಇಂತಹ ಸಮೃದ್ಧ ಜನಪದ ಪರಂಪರೆಯನ್ನು ರಂಗಭೂಮಿಯ ಮೂಲಕ ಜನಮಾನಸಕ್ಕೆ ತಲುಪಿಸುವ ಪ್ರಯತ್ನದಲ್ಲಿ ವಿಜಯಕುಮಾರ್ ಕೊಡಿಯಾಲ್ಬೈಲ್ ಅವರ ‘ಶಿವಧೂತ ಗುಳಿಗ’ ನಾಟಕವು ಸಮರ್ಥವಾಗಿ ಕಾರ್ಯನಿರ್ವಹಿಸಿದೆ. ನಮ್ಮ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಮಹತ್ವವನ್ನು ಮುಂದಿನ ತಲೆಮಾರಿಗೆ ಪರಿಚಯಿಸುವಲ್ಲಿ ಇಂತಹ ನಾಟಕಗಳ ಪಾತ್ರ ಮಹತ್ವದ್ದಾಗಿದೆ.
ಬಹಳ ಅಭಿಮಾನದ ಸಂಗತಿಯೇನೆಂದರೆ ಶಿವಧೂತ ಗುಳಿಗ ಪ್ರದರ್ಶನ ಸಾವಿರಕ್ಕೆ ಸಮೀಪಿಸುತ್ತಿದ್ದರೂ ನಿರ್ದೇಶಕರ ಮುಖದಲ್ಲಿ ಮಾತ್ರ ಹಿಂದೆ ಕಂಡಿರುವಂತೆ, ಅದೇ ನಮೃತೆ ಸರಳತೆ ಮೃದು ಮಂದಹಾಸವಿತ್ತು. ರಂಗಭೂಮಿಯ ಮೂಲಕ ಒಂದೊಳ್ಳೆಯ ನಾಟಕವನ್ನು ಕಲಾರಸಿಕರಿಗೆ ಅರ್ಪಿಸಿದ ಸಾರ್ಥಕತೆಯ ಭಾವ ಅವರ ಮುಖದಲ್ಲಿ ವ್ಯಕ್ತವಾಗುತ್ತಿತ್ತು.
ಮೊನ್ನೆ ಕುರ್ಲಾ ಬಂಟರ ಭವನದಲ್ಲಿ ನಾಟಕ ಮುಗಿದ ಮೇಲೆ ಕೊಡಿಯಾಲ್ ಬೈಲ್ ಅವರು ರಂಗಕರ್ಮಿಗಳ ಪರಿಚಯ ಮಾಡಿದ ನಂತರ ಒಂದು ಮಾತು ಹೇಳಿದರು; “ ನಾಟಕ ಇಷ್ಟ ಆಂಡ ರಡ್ ಪಾತೆರ ಬರೆಲೆ” ಇದುವೇ ನನಗಿಷ್ಟು ಬರೆಯಲು ಪ್ರೇರಣೆಯಾಯಿತು. ಕಲಾಸಂಗಮ ತಂಡದಿಂದ ಇನ್ನಷ್ಟು ಉತ್ತಮ ನಾಟಕಗಳು ಮೂಡಿ ಬರಲಿ. ರಂಗಭೂಮಿ ಶ್ರೀಮಂತವಾಗಲಿ.
✍️ಅನಿತಾ ಪಿ. ತಾಕೊಡೆ( ಮುಂಬಯಿ)
Sathish Kapikad