ಸುರತ್ಕಲ್, ನ. 19 : ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಕೊಡಬೇಕಿತ್ತು, ಆದರೆ ಇದೀಗ ಸರ್ಕಾರವೇ ಪ್ರತಿಯೊಂದಕ್ಕೂ ಜನರಿಂದ ತೆರಿಗೆ ಹಣ ಹೆಚ್ಚು ಹೆಚ್ಚು ಪಡೆದು ಗ್ಯಾರಂಟಿ ಕೊಡುವ ಸ್ಥಿತಿಗೆ ಬಂದಿದೆ. ಆಡಳಿತ ವೈಫಲ್ಯದಿಂದ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ ಎಂದು ವಿಧಾನಸಭಾ ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ವತಿಯಿಂದ ಸುರತ್ಕಲ್‌ನಲ್ಲಿ ನಡೆದ ಜನಾಂದೋಲನ – ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆಗೆ ಚಾಲನೆ ನೀಡಿ ಮಾತನಾಡಿದರು. ಕಾಂಗ್ರೆಸ್ ದರ ಏರಿಕೆ ಮತ್ತು ತೆರಿಗೆಯ ಮೂಲಕ ಜನರನ್ನು ಲೂಟಿ ಮಾಡಿ ಬದುಕಲು ಆಗದಂತಹ ಸ್ಥಿತಿಗೆ ತಂದಿಟ್ಟಿದೆ. ನಿಮ್ಮದು ಇನ್ನು ಒಂದು ವರ್ಷ ಮಾತ್ರ ಆಡಳಿತವಿದೆ, ಜನರು ಬದಲಾವಣೆ ಬಯಸಿದ್ದಾರೆ. ಒಂದು ವರ್ಷದಲ್ಲಿ ಜನರಿಗೆ ಆದಷ್ಟು ಒಳಿತು ಮಾಡಿ ಎಂದು ಅವರು ಹೇಳಿದರು.

ಒಂದೆಡೆ ಬೆಲೆ ಏರಿಕೆಯ ನಡುವೆ ಜನತೆ ನೆಮ್ಮದಿ ಕಳೆದುಕೊಂಡಿರುವಾಗ ಇನ್ನೊಂದೆಡೆ ಹಿಂದೂ ಸಮಾಜ ಗೌರವಿಸುವ ಗೋವುಗಳ ರಕ್ಷಣೆಯ ಬದಲು ಬಿಜೆಪಿ ಸರ್ಕಾರ ತಂದಿದ್ದ ಕಠಿಣ ಗೋಹತ್ಯೆ ಕಾಯ್ದೆಯನ್ನು ವಾಪಸ್ ಪಡೆದು ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದೆ. ಮತಾಂತರ ಕಾಯ್ದೆಯನ್ನು ವಾಪಸ್ ಪಡೆಯುತ್ತಿದೆ. ಸರ್ಕಾರ ಅಭಿವೃದ್ಧಿ ಕಾರ್ಯ ಬಿಟ್ಟು ಗೂಂಡಾಗಿರಿ, ಕೊತ್ವಾಲ್ ಮಾದರಿಯ ಆಡಳಿತವನ್ನು ಡಿ.ಕೆ. ಶಿವಕುಮಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಲಿಷ್ಠ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ನಲ್ಲಿ ಆಡಳಿತ ನಡೆಸಿದರೂ ಸ್ಟಿಂಗ್ ಆಪರೇಷನ್ ನಡೆಸಿ ಧ್ವನಿ ಎತ್ತದಂತೆ ಮಾಡಿದ್ದಾರೆ ಎಂದರು.

ಇನ್ನೊಂದೆಡೆ ರಾಹುಲ್ ಗಾಂಧಿ ಸೋನಿಯಾ ಗಾಂಧಿಯವರ ಪುಸ್ತಕ ಬಿಡುಗಡೆಯ ಬಳಿಕ ಸಂಸಾರದ ಗುಟ್ಟುಗಳನ್ನು ಉಪರಾಷ್ಟ್ರಪತಿಗಳು, ನ್ಯಾಯಾಧೀಶರು, ಪ್ರತಿಷ್ಠಿತ ಜನರ ಮುಂದೆ ಸಾರ್ವಜನಿಕವಾಗಿ ಬೆತ್ತಲು ಮಾಡುತ್ತಿದ್ದಾರೆ. ಇವರು ರಾಷ್ಟ್ರೀಯ ಪಕ್ಷದ ವಿಪಕ್ಷ ನಾಯಕನಾಗಿರಲು ಯೋಗ್ಯರಲ್ಲ. ಪ್ರಧಾನಿ ಮೋದಿಯವರ ನಾಯಕತ್ವ ಗುಣಕ್ಕೂ ರಾಹುಲ್ ಗಾಂಧಿಯವರ ನಾಯಕತ್ವಕ್ಕೂ ತುಲನೆ ಮಾಡಲು ಅಸಾಧ್ಯ ಎಂದು ಹೇಳಿದರು.

ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಬಿಜೆಪಿ ಆಡಳಿತ ಅವಧಿಯಲ್ಲಿ 5ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿತ್ತು. ವಿಧವಾ ವೇತನ, ಪಿಂಚಣಿ, ವೇತನಗಳು ಸಿಗುತ್ತಿತ್ತು.ಅಭಿವೃದ್ಧಿ ಕಾರ್ಯಗಳನ್ನು ಸಾವಿರಾರು ಕೋಟಿ ರೂಪಾಯಿಯಲ್ಲಿ ಮಾಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಒಂದೇ ಒಂದು ಹಕ್ಕುಪತ್ರ ಕೊಡಲಾಗಲಿಲ್ಲ, ಹೊಸ ರಸ್ತೆಯನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ. ಹಾಲಿನ ದರದಿಂದ ಹಿಡಿದು ಪ್ರತಿಯೊಂದರ ಬೆಲೆ ಏರಿಕೆ ಮಾಡಿ ಜನರಿಗೆ ನೆಮ್ಮದಿಯ ಬದುಕು ಕೊಡದೆ ಅತಂತ್ರ ಸ್ಥಿತಿಗೆ ತಳ್ಳಿದೆ. ಇದನ್ನು ಜನತೆ ಮರೆಯಲಾರರು ಎಂದು ಕಿಡಿಕಾರಿದರು.

ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ದುರಾಡಳಿತ ನಡೆಸುತ್ತಿದ್ದು ಕರ್ನಾಟಕದ ಗೌರವಕ್ಕೆ ಧಕ್ಕೆ ಬಂದಿದೆ. ಬಿಜೆಪಿ ಮತ್ತೆ ರಾಜ್ಯದ ಅಸ್ಮಿತೆಯನ್ನು ಉಳಿಸಲು ಪ್ರತಿ ಗ್ರಾಮದಲ್ಲೂ ಹೋರಾಟ ನಡೆಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ವಿಧಾನ ಪರಿಷತ್ ಸದಸ್ಯ ಬಾಲಕೃಷ್ಣ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಮುಖರಾದ ಮುನಿಸ್ವಾಮಿ ರಾಜೇಶ್, ತಿಲಕ್ ರಾಜ್ ಕೃಷ್ಣಾಪುರ, ಕವಿತಾ ಸನಿಲ್, ಪ್ರೇಮಾನಂದ ಶೆಟ್ಟಿ, ಯತೀಶ್ ನಂದನ್ ಮಲ್ಯ, ವಿಕಾಸ್ ಪುತ್ತೂರು, ಮಂಜುಳಾ ರಾವ್, ಶ್ವೇತಾ ಕುಮಾರಿ, ಶಹನವಾಜ್ ಹುಸೈನ್, ಜೇಸಿನ್ ಡಿಸೋಜಾ, ಮಾಜಿ ಕಾರ್ಪೊರೇಟರ್ಗಳು, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.

ಮಂಗಳೂರು ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಸ್ವಾಗತಿಸಿದರು. ಪುಷ್ಪರಾಜ್ ಮುಕ್ಕ ನಿರೂಪಿಸಿದರು. ಸಭೆಗೂ ಮುನ್ನ ಸುರತ್ಕಲ್ ಕಟ್ಲದಿಂದ ಜಂಕ್ಷನ್ ವರೆಗೆ ಪಾದಯಾತ್ರೆ ನಡೆಯಿತು.

ಜನಾಂದೋಲನ ಸಭೆಯಲ್ಲಿನ ಪ್ರಮುಖ ಅಂಶಗಳು :

ಸುರತ್ಕಲ್‌ನಲ್ಲಿ ಬಿಜೆಪಿ ಮಂಗಳೂರು ಉತ್ತರ ಮಂಡಲದಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಜನಾಂದೋಲನ ಮತ್ತು ಹಕ್ಕೊತ್ತಾಯ ಸಭೆ ನಡೆಯಿತು.

ಮೂರು ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ, ತೆರಿಗೆ ಹೆಚ್ಚಳ, ಗ್ಯಾರಂಟಿ ಅನುಷ್ಠಾನ ವೈಫಲ್ಯ ಎಂದು ಆರೋಪ.

ಹಾಲು, ಪೆಟ್ರೋಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ. ಉಚಿತ ಬಸ್, ಗೃಹಲಕ್ಷ್ಮಿ ಹೆಸರಿನಲ್ಲಿ ಕೊಟ್ಟು ತೆರಿಗೆ ಮೂಲಕ ವಸೂಲಿ ಮಾಡಲಾಗುತ್ತಿದೆ ಎಂಬ ಟೀಕೆ.

ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಲ್ಲ, ಐದು ತಿಂಗಳಿಂದ ಪಿಂಚಣಿ ಬಾಕಿ, ಗ್ಯಾರಂಟಿಗೆ ಹಣವಿಲ್ಲದೆ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ ಎಂಬ ವಾಗ್ದಾಳಿ.

ಡಿ.ಕೆ. ಶಿವಕುಮಾರ್ ವಿರುದ್ಧ ದುಂದು ವೆಚ್ಚ, ದುಬಾರಿ ಶಾಲು, ಭೋಜನಕೂಟದ ಆರೋಪ. ಹಾವೇರಿಯಲ್ಲಿ 300 ಮಕ್ಕಳಿಗೆ ಬಿಸಿಯೂಟ ಇಲ್ಲ ಎಂಬ ಟೀಕೆ.

ಮೋದಿ ಮಾದರಿ ಆಡಳಿತ ಕಲಿಯಲು ಸಲಹೆ, ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ಹೋರಾಟದ ಎಚ್ಚರಿಕೆ,

“ಲೂಟಿಕೋರ ಡಿ.ಕೆ.” ಘೋಷಣೆಗಳೊಂದಿಗೆ ಆಕ್ರೋಶ.

Sathish Kapikad 

 

Share.
Leave A Reply

Exit mobile version