ಮಂಗಳೂರು: ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವುಗೊಳಿಸಲಾಗುವುದು ಎಂದು ದಕ್ಷಿಣ ಕನ್ನಡದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಟೋಲ್ ತೆರವುಗೊಳಿಸಿ, ಅಗತ್ಯವಿರುವ ಸ್ಥಳದಲ್ಲಿ ಮಾತ್ರ ಟೋಲ್ ನಿರ್ಮಾಣ ಮಾಡುವ ನಿಲುವನ್ನೂ ತಿಳಿಸಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ನಾಯಕರ ಈ ಧರಣಿ ಯಾರನ್ನು ಮೆಚ್ಚಿಸಲು? ಎಂದು ಬಿಜೆಯ ಹಿರಿಯ ಮುಖಂಡರು ಪ್ರಶ್ನಿಸಿದ್ದಾರೆ.

ಈಗಾಗಲೇ ಸಂಸದರು ಸ್ಪಷ್ಟ ಭರವಸೆ ನೀಡಿರುವ ವಿಚಾರದಲ್ಲೇ ಮತ್ತೆ ಧರಣಿ ನಡೆಸುವ ಹಿಂದಿನ ಉದ್ದೇಶವಾದರೂ ಏನು? ಜನರ ಸಮಸ್ಯೆ ಪರಿಹಾರವೇ ಗುರಿಯೇ ಅಥವಾ ರಾಜಕೀಯ ಮೈಲೇಜ್ ಪಡೆಯುವ ತಂತ್ರವೇ? ಎಂದವರು ಕಿಡಿಕಾರಿದ್ದಾರೆ.

ಒಂದು ವಿಚಾರ ಸ್ಪಷ್ಟವಾಗಿರಲಿ. ಬ್ರಹ್ಮರಕೂಟ್ಲು ಟೋಲ್ ತೆರವು ವಿಚಾರದಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಬದ್ಧರಾಗಿದ್ದಾರೆ. ಜನರು ಚಿಂತಿಸುವ ಅಗತ್ಯವಿಲ್ಲ.ಕಾಂಗ್ರೆಸ್ ನಾಯಕರಿಗೆ ನಿಜವಾಗಿಯೂ ಜನರ ಬಗ್ಗೆ ಕಾಳಜಿ ಇದ್ದರೆ ಮೊದಲು ರಾಜ್ಯದ ಹದಗೆಟ್ಟ ರಸ್ತೆಗಳನ್ನು ಸರಿಪಡಿಸಲು ಹೋರಾಟ ಮಾಡಲಿ. ದಕ್ಷಿಣ ಕನ್ನಡದ ಹಲವು ರಸ್ತೆಗಳು ವರ್ಷಗಳಿಂದ ಡಾಮರೀಕರಣ ಕಾಣದೆ ಹದಗೆಟ್ಟಿವೆ. ಗುಂಡಿಬಿದ್ದ ರಸ್ತೆಗಳು ಜನರ ದೈನಂದಿನ ಪ್ರಯಾಣಕ್ಕೆ ಸಂಕಷ್ಟ ತಂದಿವೆ. ಮೊದಲು ಈ ರಸ್ತೆಗಳ ದುರಸ್ತಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಲಿ ಎಂದು ಅವರು ಸವಾಲು ಹಾಕಿದ್ದಾರೆ.

ಜನರ ತೆರಿಗೆ ಹಣದಿಂದ ನಡೆಯುವ ಸರ್ಕಾರ ಜನರಿಗೆ ಸುಸಜ್ಜಿತ ರಸ್ತೆ ನೀಡಬೇಕಲ್ಲವೇ? ತಮ್ಮದೇ ಸರ್ಕಾರದ ವೈಫಲ್ಯಗಳ ಬಗ್ಗೆ ಮೌನ, ಆದರೆ ಕೇಂದ್ರದ ಯೋಜನೆ ಮತ್ತು ಸಂಸದರ ಭರವಸೆಗಳ ವಿಚಾರದಲ್ಲಿ ಮಾತ್ರ ಹೋರಾಟದ ನಾಟಕವೇ?.

ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಬದಲು ಜನರ ನೈಜ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಕೆಲಸ ಮಾಡಿ. ಕ್ಯಾಪ್ಟನ್ ತಮ್ಮ ಮಾತಿಗೆ ಬದ್ಧರಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿ, ರೈಲ್ವೆ ಯೋಜನೆಗಳಿಗೆ ಸಂಬಂಧಿಸಿ ಅವರ ಯತ್ನಗಳು ಕಣ್ಣಮುಂದೆಯೇ ಇವೆ.  ಹಾಗಾಗಿ, ಕಾಂಗ್ರೆಸ್ ನಾಯಕರು ತಮ್ಮ ಸರ್ಕಾರದ ಜವಾಬ್ದಾರಿಯನ್ನು ಮೊದಲು ನೆನಪಿಸಿಕೊಳ್ಳಲಿ! ಎಂದು ಅವರು ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದ್ದಾರೆ.

Sathish Kapikad 

Share.
Leave A Reply

Exit mobile version