ಮಂಗಳೂರು, ನವೆಂಬರ್.15: ಸಂತ ಸಂಸ್ಮರಣಾ ಕಾರ್ಯಕ್ರಮ ಹಾಗೂ ಗೋಪಾಷ್ಟಮಿ ಪ್ರಯುಕ್ತ ಸಾರ್ವಜನಿಕ ಗೋ ಪೂಜೆ ಕಾರ್ಯಕ್ರಮವು ನವೆಂಬರ್ 17ರಂದು ಸಂಜೆ 4 ಗಂಟೆಗೆ ನಗರದ ಕದ್ರಿ ಮೈದಾನದಲ್ಲಿ ನಡೆಯಲಿದೆ ಎಂದು ದ ಸಾಫ್ರನ್ ಫ್ರಂಟ್ ಕೇಸರಿ ಒಕ್ಕೂಟದ ಕಾನೂನು ಸಲಹೆಗಾರ ದಿನಕರ ಶೆಟ್ಟಿ ತಿಳಿಸಿದರು.

ಶನಿವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದ ಸಾಫ್ರನ್ ಫ್ರಂಟ್ ಕೇಸರಿ ಒಕ್ಕೂಟದ ನೇತೃತ್ವದಲ್ಲಿ ‘ಜಾಗೃತ ಸಂತ, ಉದ್ಭವ ಭಾರತ’ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 33 ಮಂದಿ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಕದ್ರಿ ದೇವಸ್ಥಾನದಿಂದ ಕದ್ರಿ ಮೈದಾನದವರೆಗೆ ಮೆರವಣಿಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಐದು ಸಾವಿರಕ್ಕು ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ.

1966ರ ನವೆಂಬರ್ 6ರಂದು ದೆಹಲಿಯ ಸಂಸತ್ ಭವನದ ಎದುರು ಗೋಪಾಷ್ಟಮಿಯ ಸಂದರ್ಭದಲ್ಲಿ ಸ್ವಾಮಿ ಕರಪಾತ್ರಿ ಮಹಾರಾಜ್ ಅವರ ನೇತೃತ್ವದಲ್ಲಿ ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ ರಾಷ್ಟ್ರವ್ಯಾಪಿ ಚಳವಳಿ ನಡೆದಿತ್ತು. ಈ ಹೋರಾಟದಲ್ಲಿ ಪಾಲ್ಗೊಂಡಿದ್ದ ಲಕ್ಷಾಂತರ ಸಂತರ ಪೈಕಿ ಅನೇಕರು ಮಾರಣಹೋಮಕ್ಕೆ ಬಲಿಯಾಗಿದ್ದರು. ಈ ದುರಂತಕ್ಕೆ ಇದೀಗ 60 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸನಾತನ ಧರ್ಮದ ಪುನರುತ್ಥಾನಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡ ಸಂತ ಮಹಾತ್ಮರನ್ನು ಸ್ಮರಿಸಿ ಗೌರವ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಿನಕರ್ ಶೆಟ್ಟಿ ವಿವರ ನೀಡಿದರು.

ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ರಾಜೇಶ್ ಪವಿತ್ರನ್ ಅವರು ಮಾತನಾಡಿ, ಶ್ರೀ ರಾಮ ಕ್ಷೇತ್ರ ಕನ್ಯಾಡಿಯ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದೆ.

 

ಈಗಾಗಲೇ ವಿವಿಧ ಹಿಂದೂಪರ ಸಂಘಟನೆಗಳಿಗೆ ಆಹ್ವಾನ ನೀಡಲಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಗೋ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಸಮಿತಿಯ ಪ್ರಮುಖರಾದ ಭಕ್ತಿ ಭೂಷಣ್ ದಾಸ್ ಗುರೂಜಿ, ಡಾ.ಎಲ್.ಕೆ. ಸುವರ್ಣ, ಇ.ಎಸ್ ಮುನಿರತ್ನ, ತುಷಾರ್ ಕದ್ರಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Sathish Kapikad 

Share.
Leave A Reply

Exit mobile version