ಮಂಗಳೂರು, ನವೆಂಬರ್.13 : ಕೇಂದ್ರ ರೈಲ್ವೇ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ರಾಜಧಾನಿ ಬೆಂಗಳೂರನ್ನು ಕರಾವಳಿಯ ಮಂಗಳೂರು, ಉಡುಪಿ, ಕಾರವಾರ ಮೂಲಕ ಗೋವಾದ ಮಡಗಾಂವ್‌ನೊಂದಿಗೆ ಸಂಪರ್ಕಿಸುವ ಬಹುನಿರೀಕ್ಷಿತ ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲು ಸೇವೆಗೆ ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿಂದು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಅಭಿವೃದ್ಧಿಗೆ 94 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳನ್ನು ಅಮೃತ ಭಾರತ್ ನಿಲ್ದಾಣ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು. ಈ ಭಾಗದ ರೈಲ್ವೆ ಅಭಿವೃದ್ಧಿಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ಕರಾವಳಿ ಕರ್ನಾಟಕವನ್ನು ರಾಜ್ಯದ ರಾಜಧಾನಿ ಬೆಂಗಳೂರಿನೊಂದಿಗೆ ಬೆಸೆಯುವ ಬಹುಕಾಲದ ಕನಸು ಇಂದು ನನಸಾಗಿದೆ. ಪಶ್ಚಿಮ ಘಟ್ಟದ ವಿದ್ಯುದ್ದೀಕರಣದಲ್ಲಿದ್ದ ಹಲವಾರು ತಾಂತ್ರಿಕ ಅಡಚಣೆಗಳನ್ನು ಮೆಟ್ಟಿನಿಂತು ಇಂದು ಯಶಸ್ವಿಯಾಗಿ ರೈಲು ಸಂಚಾರ ಆರಂಭಿಸಿದ್ದೇವೆ. ಮಂಗಳೂರನ್ನು ನೈಋತ್ಯ ರೈಲ್ವೆ ವ್ಯಾಪ್ತಿಗೆ ತರುವಲ್ಲಿ ಶ್ರಮಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಕುಂದಾಪುರ ನಿಲ್ದಾಣದ ಅಭಿವೃದ್ಧಿಗಾಗಿ ನಿರಂತರವಾಗಿ ಒತ್ತಡ ಹೇರಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಕಾರ್ಯವನ್ನು ಸಚಿವರು ವಿಶೇಷವಾಗಿ ಅಭಿನಂದಿಸಿದರು.

ಕರ್ನಾಟಕ ಹಾಗೂ ಗೋವಾ ರಾಜ್ಯಗಳ ನಡುವೆ ಆಧುನಿಕ, ವೇಗದ ಮತ್ತು ಆರಾಮದಾಯಕ ರೈಲು :850 ಕಿ.ಮೀ ದೂರ

850 ಕಿ.ಮೀ ದೂರ ನೂತನ ರೈಲ್ವೇ ಸೇವೆಯು ಕರಾವಳಿ ಕರ್ನಾಟಕ ಹಾಗೂ ಗೋವಾ ರಾಜ್ಯಗಳ ನಡುವೆ ಆಧುನಿಕ, ವೇಗದ ಮತ್ತು ಆರಾಮದಾಯಕ ರೈಲು ಸಂಪರ್ಕವನ್ನು ಒದಗಿಸಲಿದೆ.

ಯಶವಂತಪುರದಿಂದ ಸಂಚರಿಸುವ ಈ ರೈಲು, ಮಡಗಾಂವ್ ತಲುಪುವ ಮಾರ್ಗದಲ್ಲಿ ಹಾಸನ, ಸಕಲೇಶಪುರ, ಮಂಗಳೂರು, ಉಡುಪಿ, ಮುರ್ಡೇಶ್ವರ, ಗೋಕರ್ಣ ಮತ್ತು ಕಾರವಾರ ಸೇರಿದಂತೆ ಪ್ರಮುಖ ನಗರಗಳು ಹಾಗೂ ಪ್ರವಾಸಿ ತಾಣಗಳನ್ನು ಸಂಪರ್ಕಿಸಲಿದೆ. ಸುಮಾರು 850 ಕಿ.ಮೀ. ದೂರವನ್ನು ಕ್ರಮಿಸುವ ಈ ರೈಲು, ಇತ್ತೀಚೆಗೆ ವಿದ್ಯುದ್ದೀಕರಣಗೊಂಡ ಸಕಲೇಶಪುರ-ಸುಬ್ರಹ್ಮಣ್ಯರಸ್ತೆ ಘಾಟ್ ವಿಭಾಗದ ಮೂಲಕವೂ ಸಂಚರಿಸಲಿದೆ.

ಈ ಹೊಸ ರೈಲು ಸೇವೆಯಿಂದ ಬೆಂಗಳೂರು ನಗರ, ಹಾಸನ, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲದೆ, ದಕ್ಷಿಣ ಗೋವಾದ ಪ್ರಯಾಣಿಕರಿಗೂ ಹೆಚ್ಚಿನ ಅನುಕೂಲವಾಗಲಿದೆ. ವಿದ್ಯಾರ್ಥಿಗಳು, ಯುವ ವೃತ್ತಿಪರರು, ಉದ್ಯಮಿಗಳು ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ಪ್ರಯಾಣಿಸುವವರಿಗೆ ವೇಗದ ಮತ್ತು ಅನುಕೂಲಕರ ಪ್ರಯಾಣದ ಆಯ್ಕೆ ಲಭ್ಯವಾಗಲಿದೆ. ಜೊತೆಗೆ, ಕರಾವಳಿ ಕರ್ನಾಟಕ ಮತ್ತು ಗೋವಾದ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಸುಧಾರಿಸುವ ಮೂಲಕ ಪ್ರವಾಸೋದ್ಯಮದ ಬೆಳವಣಿಗೆಗೂ ಉತ್ತೇಜನ ದೊರೆಯಲಿದೆ.

ಕಾರ್ಯಕ್ರಮದಲ್ಲಿ ಮಂಗಳೂರು  ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಸುರತ್ಕಲ್ ಶಾಸಕ ಡಾ.ಭರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Sathish Kapikad 

Share.
Leave A Reply

Exit mobile version