ಮಂಗಳೂರು: ಕರಾವಳಿಯ ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಹಾಗೂ ತಂತ್ರಜ್ಞರ ಸಾಮೂಹಿಕ ಪ್ರಯತ್ನದಲ್ಲಿ ಮೂಡಿ ಬಂದಿರುವ ‘ವಾದಿರಾಜ ವಾಲಗ ಮಂಡಳಿ’ (ವಿ.ವಿ.ಎಂ.) ಕನ್ನಡ ಚಲನಚಿತ್ರ ಡಿಸೆಂಬರ್ ತಿಂಗಳ ಕೊನೆಯಲ್ಲಿ ರಾಜ್ಯಾದ್ಯಂತ ತೆರೆಕಾಣಲು ಸಿದ್ಧವಾಗಿದೆ. ಎಂ.ಎನ್.ಆರ್. ಪ್ರೊಡಕ್ಷನ್ ಬ್ಯಾನರ್‌ನಡಿ ನಿರ್ಮಾಣಗೊಂಡಿರುವ ಈ ಚಿತ್ರದ ಪೋಸ್ಟರ್ ಹಾಗೂ ಮೋಶನ್ ಪೋಸ್ಟರ್‌ಗಳನ್ನು ಶನಿವಾರ ನಗರದ ಓಶಿಯನ್ ಪರ್ಲ್ ಹೊಟೇಲ್‌ನಲ್ಲಿ ಅನಾವರಣಗೊಳಿಸಲಾಯಿತು.

ಚಿತ್ರದ ನಿರ್ಮಾಪಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ಕರಾವಳಿಯ ಪ್ರತಿಭಾವಂತ ಕಲಾವಿದರು ಮತ್ತು ತಂತ್ರಜ್ಞರನ್ನು ಒಗ್ಗೂಡಿಸಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಈ ಚಿತ್ರದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದ್ದು, ಎಲ್ಲರೂ ಅತ್ಯಂತ ಉತ್ಸಾಹದಿಂದ ಕೆಲಸ ಮಾಡಿದ್ದಾರೆ. ಚಿತ್ರವು ಪ್ರೇಕ್ಷಕರ ಮೆಚ್ಚುಗೆ ಗಳಿಸುವುದರೊಂದಿಗೆ ಉತ್ತಮ ಯಶಸ್ಸು ಸಾಧಿಸಲಿದೆ ಎಂಬ ವಿಶ್ವಾಸವಿದೆ. ಕರಾವಳಿಯ ಸಾಂಸ್ಕೃತಿಕ ಸೊಗಡು ಮತ್ತು ಇಲ್ಲಿನ ಪ್ರತಿಭೆಗಳ ಸಾಮರ್ಥ್ಯವನ್ನು ಪರಿಚಯಿಸುವ ವಿಶಿಷ್ಟ ಪ್ರಯತ್ನ ಇದಾಗಿದೆ ಎಂದರು.

ಡಿಸೆಂಬರ್ ತಿಂಗಳ ಕೊನೆಯಲ್ಲಿ ಬಿಡುಗಡೆ :

ಕರಾವಳಿಯ ಹಾಸ್ಯ ನಟರ ದಂಡು ಸೇರಿಕೊಂಡಿರುವ ವಾದಿರಾಜ ವಾಲಗ ಮಂಡಳಿ ಕನ್ನಡ ಚಲನಚಿತ್ರ ಸಂಪೂರ್ಣಗೊoಡಿದ್ದು ಡಿಸೆಂಬರ್ ತಿಂಗಳ ಕೊನೆಯಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಧರಿಸಿದ್ದೇವೆ ಎಂದು ಚಿತ್ರದ ನಿರ್ದೇಶಕ ಶಶಿರಾಜ್ ಕಾವೂರು ತಿಳಿಸಿದರು.

ಅವರು ಚಿತ್ರದ ನಿರ್ಮಾಪಕ ಹಾಗೂ ಎಸ್.ಡಿ.ಸಿ.ಸಿ.ಬ್ಯಾಂಕಿನ ಅಧ್ಯಕ್ಷರು ಆಗಿರುವ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅವರ ಉಪಸ್ಥಿತಿಯಲ್ಲಿ ನಡೆದ ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಎಂ.ಎನ್.ಆರ್. ಪ್ರೊಡಕ್ಷನ್ ಈಗಾಗಲೇ ತಮ್ಮ ಬ್ಯಾನರ್ ನಲ್ಲಿ ಯಶಸ್ವಿ ಸಿನೆಮಾ ‘ಗಲಾಟೆ’ ಮತ್ತು ‘ಜೋಗುಳ’ ಎಂಬ ಧಾರಾವಾಹಿಗಳನ್ನು ನಿರ್ಮಿಸಿದ್ದು ಉತ್ತಮ ಅಭಿರುಚಿಯ ಕನ್ನಡ ಸಿನೆಮಾಗಳನ್ನು ನಿರ್ಮಾಣ ಮಾಡುವಲ್ಲಿ ಒಲವು ತೋರಿಸಿದೆ. ಇದೀಗ ನಮ್ಮ ಬಹು ನಿರೀಕ್ಷೆಯ ʼವಿವಿಎಂʼ ಚಿತ್ರದ ಪೋಸ್ಟರ್ ನ್ನು ಅನಾವರಣಗೊಳಿಸುವ ಮೂಲಕ ಚಲನಚಿತ್ರದ ಮೊದಲ ನೋಟದ ಪರಿಚಯ ಮಾಡಿಸಿದ್ದೇವೆ ಎಂದರು.

 ಬ್ರಹ್ಮಾವರ, ಮಂಗಳೂರು, ಮುಲ್ಕಿ, ಕಾಸರಗೋಡು ಮುಂತಾದ ಪ್ರದೇಶದಲ್ಲಿ ಸುಮಾರು 55 ದಿನಗಳ ಕಾಲ ಎರಡು ಹಂತದಲ್ಲಿ ಚಿತ್ರೀಕರಣ ನಡೆದಿದೆ. ‘ವಿವಿಎಮ್’ ಕರಾವಳಿ ಕನ್ನಡದ ಸೊಗಡಿನಲ್ಲಿದ್ದು ಉತ್ತಮವಾಗಿ ಮೂಡಿಬಂದಿದ್ದು ಸಂಪೂರ್ಣ ಹಾಸ್ಯದೊಂದಿಗೆ ಕುಟುಂಬ ಸಮೇತ ನೋಡುವ ಮನೋರಂಜನಾತ್ಮಕ ಚಿತ್ರವಾಗಿದೆ.

ಗುಂಡುಮಾಮ ಖ್ಯಾತಿಯ ನವೀನ್ ಡಿ ಪಡೀಲ್, ‘ಸು ಫ್ರಮ್ ಸೊ’ ಖ್ಯಾತಿಯ ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪ ರಾಜ್ ಬೊಳ್ಳಾರು, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಶೋಭರಾಜ್ ಪಾವೂರು, ಲಕ್ಷ್ಮಣ ಮಲ್ಲೂರು ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಇದ್ದಾರೆ, ಅರ್ಜುನ್ ವೇದಾಂತ್, ಅಥರ್ವ ಪ್ರಕಾಶ್ ನಾಯಕರಾಗಿ, ತನ್ವಿ ರಾವ್, ವೇನ್ಯ ರೈ ನಾಯಕಿಯರಾಗಿ ಮಿಂಚಿದ್ದಾರೆ.

ಅನುಭವಿ ಛಾಯಾಗ್ರಾಹಕ ಚೆನ್ನೈಯ ಎಸ್.ಚಂದ್ರಶೇಖರನ್ ಕೈಚಳಕ ಚಿತ್ರಕ್ಕಿದೆ. ಮಣಿಕಾಂತ್ ಕದ್ರಿ ಸಂಗೀತ ಸಿನಿ ರಸಿಕರ ಮನತಣಿಸಲಿದೆ. ಸ್ಟಂಟ್ ಶಿವು ಸಾಹಸವಿದೆ. ವಿನಾಯಕ ಆಚಾರ್ಯ ನೃತ್ಯ ನಿರ್ದೇಶನವಿದೆ. ಜಯಪ್ರಕಾಶ್ ತುಂಬೆಯವರು ಸಹ ನಿರ್ಮಾಪಕರಾಗಿ ಸಹಕರಿಸಿದ್ದಾರೆ ಎಂದರು.

ಸಂತೋಷ್ ಶೆಟ್ಟಿ ಮತ್ತು ಲಕ್ಷ್ಮಣ ಕುಮಾರ್ ಮಲ್ಲೂರು ಕಾರ್ಯಕಾರಿ ನಿರ್ಮಾಪಕರಾಗಿ ಮತ್ತು ರಾಜೇಶ್ ಕುಡ್ಲ ಪ್ರೊಡಕ್ಷನ್ ಮಾನೇಜರ್ ಆಗಿ ದುಡಿದಿದ್ದಾರೆ. ಪ್ರಸಿದ್ದ ಕಲಾವಿದ ದೇವಿ ಪೋಸ್ಟರ್ ವಿನ್ಯಾಸ ಮಾಡಿದ್ದಾರೆ.

ವರಾಹ ರೂಪಂ ಹಾಡಿನ ಮೂಲಕ ಖ್ಯಾತಿ ಪಡೆದ ನಟ, ನಿರ್ದೇಶಕ, ಸಾಹಿತಿ ಶಶಿರಾಜ್ ಕಾವೂರು ಈ ಚಿತ್ರವನ್ನು ರಚಿಸಿ ನಿರ್ದೇಶಿಸಿದ್ದಾರೆ.

ಹಾಸ್ಯ ಮತ್ತು ಕುತೂಹಲಭರಿತ ಕಥಾಹಂದರ ಹೊಂದಿರುವ ವಾದಿರಾಜ ವಾಲಗ ಮಂಡಳಿ ಕನ್ನಡ ಚಲನಚಿತ್ರ ಕುಟುಂಬ ಸಮೇತ ಒಟ್ಟಾಗಿ ಕುಳಿತು ನೋಡಬಹುದಾದ ಮನೋರಂಜನಾತ್ಮಕ ಸಿನೆಮಾವಾಗಿ ಮೂಡಿಬರಲಿದೆ. ಕರಾವಳಿಯ ಸಂಭಾಷಣಾ ಶೈಲಿ ಮತ್ತು ಕಥಾಹಂದರ ಇದರ ಧನಾತ್ಮಕ ಅಂಶಗಳು.

ಚಲನಚಿತ್ರದ ನವಿರಾದ ಹಾಸ್ಯ ಮತ್ತು ಗುಣಮಟ್ಟವನ್ನು ನೋಡಿ ಇದನ್ನು ನೆರೆರಾಜ್ಯದ ಕೇರಳಿಗರೂ ಇಷ್ಟ ಪಡುತ್ತಾರೆ ಎಂಬ ವಿಶ್ವಾಸದಿಂದ ಇದನ್ನು ಮಲೆಯಾಳಂ, ತಮಿಳು ಭಾಷೆಗಳ ಡಬ್ಬಿಂಗ್ ನಡೆಯುತ್ತಿದ್ದು ಕಾರ್ಯ ಪ್ರಗತಿಯಲ್ಲಿದೆ.

ಸಂಗೀತಮಯ ಸಿನೆಮ – ವಿ ವಿ ಎಂ..!

ಸಿನೆಮಾದಲ್ಲಿ ಒಂಬತ್ತು ಹಾಡುಗಳಿದ್ದು, ಐದು ಪೂರ್ಣ ಪ್ರಮಾಣದ ಹಾಡಾಗಿದ್ದರೆ ನಾಲ್ಕು ತುಣುಕು ಹಾಡುಗಳಿವೆ. ಬ್ರಹ್ಮಕಲಶ ಹಾಡು ಹಾಡಿದ ಕೆನಡಾ ಮೂಲದ ಅಭಿü ವಿ, ವರಾಹರೂಪಂ ಹಾಡಿದ ಚೆನ್ನೈ ಮೂಲದ ಸಾಯಿವಿಘ್ನೇಶ್, ಮೈಮ್ ರಾಮದಾಸ್, ಪ್ರಕಾಶ್ ಮಹಾದೇವನ್, ರವೀಂದ್ರ ಪ್ರಭು, ಮಣಿಕಾಂತ್ ಕದ್ರಿ ಮುಂತಾದವರು ಹಾಡುಗಳಿಗೆ ದನಿಯಾಗಿದ್ದು ಎಲ್ಲಾ ಹಾಡುಗಳು ಇಂಪಾಗಿ ಮೂಡಿಬಂದಿವೆ. ತೆರೆಗೆ ಬರಲು ತಯಾರಿದ್ದರೂ ಬೇರೆ ಸಿನೆಮಾಗಳಿಗೆ ಸ್ಪರ್ಧೆ ಆಗದಂತೆ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆ ಮಾಡಲಿದ್ದೇವೆ ಎಂದು ಡಾ|ಎಂ.ಎನ್.ಆರ್ ವಿವರ ನೀಡಿದರು.

ಕಾರ್ಯಕ್ರಮದಲ್ಲಿ ಸಹ ನಿರ್ಮಾಪಕ ಜಯಪ್ರಕಾಶ್ ತುಂಬೆ, ನಟ ಹಾಗೂ ಎಸ್.ಡಿ.ಸಿ.ಸಿ ಬ್ಯಾಂಕಿನ ಸಿ ಇ ಓ ಗೋಪಾಲ ಕೃಷ್ಣ ಭಟ್, ಕಾರ್ಯಕಾರಿ ನಿರ್ಮಾಪಕರಾದ ಲಕ್ಷ್ಮಣ ಕುಮಾರ್ ಮಲ್ಲೂರು, ಸಂತೋಷ್ ಶೆಟ್ಟಿ, ನಿರ್ದೇಶಕ ಶಶಿರಾಜ್ ಕಾವೂರು ಚಿತ್ರದ ಮುಖ್ಯ ಪಾತ್ರಧಾರಿ ಕುಸಲದರಸೆ ನವೀನ್ ಡಿ. ಪಡೀಲ್, ಮಣಿಕಾಂತ್ ಕದ್ರಿ ಮುಂತಾದವರು ಉಪಸ್ಥಿತರಿದ್ದರು. ‎

Sathish Kapikad 

Share.
Leave A Reply

Exit mobile version