ಮಂಗಳೂರು: ಸುರತ್ಕಲ್ ಪೊಲೀಸರ ವಿಚಾರಣೆ ನೆಪದ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಹೊಸಬೆಟ್ಟು ನಿವಾಸಿ ಸೋಮನಾಥರ ಮನೆಗೆ ಶಾಸಕ ವೇದವ್ಯಾಸ ಕಾಮತ್ ರವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ತಪ್ಪಿತಸ್ಥ ಪೊಲೀಸರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕ್ಕೆ ಆಗ್ರಹಿಸಿದರು.

ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ತಡರಾತ್ರಿ ಬೀಚ್ ನ ನಿರ್ಜನ ಪ್ರದೇಶದಲ್ಲಿ ಯುವಕ ಹಾಗೂ ಯುವತಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದನ್ನು ಗಮನಿಸಿ, ಯಾಕಾಗಿ ಬಂದಿದ್ದಾರೆ? ಆತ್ಮಹತ್ಯೆಯಂತಹ ದುರುದ್ದೇಶ ಇರಬಹುದೇ ಎಂಬಿತ್ಯಾದಿ ಸುರಕ್ಷತೆ ದೃಷ್ಟಿಯಿಂದ ಬೀಚ್ ಸಮೀಪದ ಮನೆಯವರು ವಿಚಾರಿಸಿದ್ದಾರೆ ಹೊರತು ಅವರ ಜಾತಿ ಧರ್ಮವನ್ನೇ ಕೇಳಿಲ್ಲ, ಹಲ್ಲೆ ಮಾಡಿಲ್ಲ. ಆದರೂ ಸೋಮನಾಥರನ್ನು ಠಾಣೆಗೆ ಕರೆಸಿ ಯುವತಿಯ ಕಾಲಿಗೆ ಬೀಳಿಸಿ ವಿಡಿಯೋ ಮಾಡಿ ಅವಮಾನಿಸಿದ್ದಾರೆ.

ಸ್ವತಃ ದೂರುದಾರೆಯೇ ನನಗೆ ಯಾವುದೇ ದೈಹಿಕ ಹಲ್ಲೆಯಾಗಿಲ್ಲ ಎಂದಿದ್ದರೂ ಪದೇ ಪದೇ ಠಾಣೆಗೆ ಕರೆಸಿ ಬೆಳಿಗ್ಗೆಯಿಂದ ರಾತ್ರಿವರೆಗೆ ಕಿರುಕುಳ ನೀಡಿ, ಹತ್ತು ವರ್ಷ ಜೈಲಲ್ಲಿ ಕೊಳೆಯುವ ಹಾಗೆ ಮಾಡುತ್ತೇನೆಂದು ಬೆದರಿಕೆ ಹಾಕುವ ಮೂಲಕ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದರು.

ಈಗ ಈ ಸಾವಿನ ಹೊಣೆಯನ್ನು ಪೊಲೀಸ್ ಇಲಾಖೆ, ಜಿಲ್ಲಾಡಳಿತ, ರಾಜ್ಯ ಕಾಂಗ್ರೆಸ್ ಸರ್ಕಾರ ಹೊರುತ್ತದೆಯೇ ಎಂದು ಪ್ರಶ್ನಿಸಿದ ಶಾಸಕರು, ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದರು.

ಶ್ರಮಜೀವಿ ಹಾಗೂ ಸ್ವಾಭಿಮಾನಿಗಳಾದ ಮೊಗವೀರರು ತಮ್ಮ ಪರಿಸರದಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳನ್ನು ಸಹಿಸದವರು. ಸ್ಥಳೀಯರು ಹಾಗೂ ಕುಟುಂಬಸ್ಥರು ಈ ಸಾವಿಗೆ ಕಾರಣವಾಗಿರುವ ಪೊಲೀಸರ ಜೊತೆಗೆ ದೂರುದಾರ ಯುವತಿ ಮತ್ತು ಯುವಕನ ವಿರುದ್ಧವೂ ಕ್ರಮವಾಗಬೇಕೆಂದು ಬೇಡಿಕೆಯಿಟ್ಟಿದ್ದು ಆ ಬಗ್ಗೆಯೂ ಸಮರ್ಪಕ ತನಿಖೆಯಾಗಲಿ ಎಂದು ಶಾಸಕರು ಒತ್ತಾಯಿಸಿದರು.

Sathish Kapikad

Share.
Leave A Reply

Exit mobile version