
ಮಂಗಳೂರು, ಸೆಪ್ಟೆಂಬರ್. 30: : ನಗರದ ಹೊರವಲಯದ ಸುರತ್ಕಲ್ ಸಮೀಪ ಎಂಆರ್‌ಪಿಎಲ್ ಘಟಕದ ಬಳಿ ಬುಧವಾರ ಭಾರೀ ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಸ್ಫೋಟದ ಭಾರೀ ಶಬ್ದ ಹಾಗೂ ಕಂಪನದಿಂದ ಜೋಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮನೆಗಳು ಮತ್ತು ಕಟ್ಟಡಗಳು ಕಂಪಿಸಿದವು. ಕೆಲವು ಮನೆಗಳ ಬಾಗಿಲು, ಕಿಟಕಿಗಳು ಅಲುಗಾಡಿದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸ್ಫೋಟದ ಬೆನ್ನಲ್ಲೇ ಘಟನಾ ಪ್ರದೇಶದ ಆಕಾಶದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಅಂಗರಗುಂಡಿ, ಬೈಕಂಪಾಡಿ ಕೈಗಾರಿಕಾ ಪ್ರದೇಶ, ಕುಳಾಯಿ ಸೇರಿದಂತೆ ಹಲವು ಕಡೆಗಳಲ್ಲೂ ಸ್ಫೋಟದ ಸದ್ದು ಕೇಳಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಫೋಟದ ನಿಖರ ಕಾರಣ, ಘಟಕದೊಳಗಿನ ಪರಿಸ್ಥಿತಿ ಹಾಗೂ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾಗಿದೆಯೇ ಎಂಬ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಇಂದು ಮಧ್ಯಾಹ್ನ 12.15 ಗಂಟೆಗೆ MRPL ನ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕ (CHTU) ಘಟಕದಲ್ಲಿ ಸ್ಪೋಟ ಸಂಭವಿಸಿದೆ.
ಈ ಅವಘಡದಲ್ಲಿ 9 ಜನರಿಗೆ ಗಾಯಗಳಾಗಿವೆ. ಪ್ರಸ್ತುತ ಬೆಂಕಿ ನಿಯಂತ್ರಣಕ್ಕೆ ಬಂದಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಓ ನರ್ವಡೆ ವಿನಾಯಕ್ ಕಾರ್ಭಾರಿ ಭೇಟಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿ MRPL ಸಂಸ್ಥೆಯಿಂದ ನಿರೀಕ್ಷಿಸಲಾಗಿದೆ.
_Sathish Kapikad