
ಮಂಗಳೂರು: 139 ವರ್ಷಗಳ ಇತಿಹಾಸ ಹೊಂದಿರುವ ನಗರದ ಮಲ್ಲಿಕಟ್ಟೆಯ ಶಿವಭಾಗ್ ಸಮೀಪದ ಮೆರ್ಕಾರಾ ಹಿಲ್ನಲ್ಲಿರುವ ಐತಿಹಾಸಿಕ ಸಿಎಸ್ಐ ಸುಶಾಂತಿ ನಿಲಯದ ಪುನರ್ ಅಭಿವೃದ್ಧಿಗೊಂಡ ಸಮುದಾಯ ಭವನವು ಸೆ.25ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಿಎಸ್ಐ ಸುಶಾಂತಿ ದೇವಾಲಯದ ಸಭಾಪಾಲಕ ರೆ.ಸಂತೋಷ್ ಕುಮಾರ್ ಸಿಂಗ್ ತಿಳಿಸಿದರು.
ಚರ್ಚ್ ಆವರಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಿಎಸ್ಐ ಕರ್ನಾಟಕ ದಕ್ಷಿಣ ಡಯಾಸಿಸ್ನ ಬಿಷಪ್ ರೆ. ಹೇಮಚಂದ್ರ ಕುಮಾರ್ ವಹಿಸಲಿದ್ದಾರೆ. ಎಂ, ರೆ. ಡಾ.ಡೆಕ್ಟರ್ ಮಾಬೆನ್ ಹಾಗೂ ರೆ. ಸಂತೋಷ್ ಕುಮಾರ್ ಸಿಂಗ್ ಅವರು ಉದ್ಘಾಟಿಸಲಿದ್ದು, ಸಂತೋಷ್ ಕುಮಾರ್ ಜೋನಸ್, ಕಿರಣ್ ಕರಾಟ್ ಹಾಗೂ ದೇವಪುತ್ರ ಕೋಟ್ಯಾನ್ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸಂಸ್ಥೆಯ ಪ್ರಮುಖರಾದ ಬೆನೆಟ್ ಅಮಣ್ಣ ಮಾತನಾಡಿ, 1887ರಲ್ಲಿ ಆರಂಭಗೊಂಡ ಸುಶಾಂತಿ ನಿಲಯವು 139 ವರ್ಷಗಳ ಪರಂಪರೆಯನ್ನು ಹೊಂದಿದೆ. ಮೆರ್ಕಾರಾ ಹಾಗೂ ಸುತ್ತಮುತ್ತಲಿನ ಸಾವಿರಾರು ಜನರಿಗೆ ಇದು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಇದೀಗ ಜೋನಸ್ ಪೆಟ್ರೋ ಪ್ರೊಡಕ್ಟ್ ಸಂಸ್ಥೆಯ ನಿರ್ದೇಶಕ ಸುನಿಲ್ ಜೋನಸ್ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಸಂಧ್ಯಾ ಜೋನಸ್ ಅವರ ಸಹಕಾರದಿಂದ ಸಮುದಾಯ ಭವನವನ್ನು ನವೀಕರಿಸಲಾಗಿದೆ ಎಂದು ಹೇಳಿದರು.
ಐತಿಹಾಸಿಕ ಕಟ್ಟಡದ ಮೂಲ ಸ್ವರೂಪವನ್ನು ಉಳಿಸಿಕೊಂಡು ಆಧುನಿಕ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಪುನರ್ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಸುಮಾರು ಏಳು ತಿಂಗಳ ಕಾಲ ನಡೆದ ಕಾಮಗಾರಿಯಲ್ಲಿ 300 ಆಸನಗಳ ಹವಾನಿಯಂತ್ರಿತ ಸಮುದಾಯ ಭವನವನ್ನು ನಿರ್ಮಿಸಲಾಗಿದೆ.
ದಾನಿ ಸುನಿಲ್ ಜೋನಸ್ ಮಾತನಾಡಿ, ತಮ್ಮ ಅಗಲಿದ ತಂದೆ-ತಾಯಿಗಳಾದ ಎಲಿಯ ಜೋನಸ್ ಸೆಬಾಸ್ಟಿಯನ್ ಹಾಗೂ ವಿ. ಸುಲೋಚನಿ ಜೋನಸ್ ಅವರ ಸ್ಮರಣಾರ್ಥ ಈ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ನೂತನ ಭವನದ ಸೌಲಭ್ಯಗಳು ಸಮಾಜದ ಎಲ್ಲ ವರ್ಗದ ಜನರಿಗೆ ಉಪಯೋಗವಾಗಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಧ್ಯಾ ಜೋನಸ್ ಹಾಗೂ ಸಂತೋಷ್ ಕುಮಾರ್ ಜೋನಸ್ ಉಪಸ್ಥಿತರಿದ್ದರು.
_Sathish Kapikad