
ಮಂಗಳೂರು, ಆಗಸ್ಟ್. 28 : ಕಲ್ಕೂರ ಪ್ರತಿಷ್ಠಾನ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಸಹಯೋಗದಲ್ಲಿ ಆಯೋಜಿಸಲಾಗುತ್ತಿರುವ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆ ಸೆಪ್ಟೆಂಬರ್ 4ರಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದರು.
ನಗರದಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಹಾಗೂ ಪ್ರತಿಭೆಯನ್ನು ಬೆಳೆಸುವ ಉದ್ದೇಶದಿಂದ ಕಳೆದ 44 ವರ್ಷಗಳಿಂದ ನಡೆಯುತ್ತಿರುವ ಈ ಉತ್ಸವದಲ್ಲಿ ಈ ಬಾರಿ 44 ವಿಭಾಗಗಳ ಸ್ಪರ್ಧೆಗಳು 12 ವೇದಿಕೆಗಳಲ್ಲಿ ಏಕಕಾಲದಲ್ಲಿ ನಡೆಯಲಿವೆ. ಬೆಳಿಗ್ಗೆ 9ರಿಂದ ರಾತ್ರಿ 12ರವರೆಗೆ ವಿವಿಧ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ದೇಶದ ವಿವಿಧೆಡೆಯಿಂದ 3 ಸಾವಿರಕ್ಕೂ ಅಧಿಕ ಮಕ್ಕಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.


ತೊಟ್ಟಿಲ ಕೃಷ್ಣ, ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಗೀತಾ ಕೃಷ್ಣ, ರಾಧಾಕೃಷ್ಣ, ಯಶೋದ ಕೃಷ್ಣ, ದೇವಕಿ ಕೃಷ್ಣ, ವಸುದೇವ ಕೃಷ್ಣ, ಯಕ್ಷ ಕೃಷ್ಣ ಹಾಗೂ ಕೃಷ್ಣ-ಕುಚೇಲ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ಇದೇ ವೇಳೆ ಆಗಸ್ಟ್ 30ರಂದು ಬೆಳಿಗ್ಗೆ 9ರಿಂದ ಶಾರದಾ ವಿದ್ಯಾಲಯ, ಕೊಡಿಯಾಲ್ಬೈಲ್ನಲ್ಲಿ ವಿದ್ಯಾರ್ಥಿಗಳಿಗಾಗಿ ಶ್ರೀ ಕೃಷ್ಣ ಗಾನ , ರಂಗೋಲಿಯಲ್ಲಿ ಕೃಷ್ಣ , ಕೃಷ್ಣ ಕಥಾ ಸ್ಪರ್ಧೆಗಳು ಪೂರ್ವಭಾವಿಯಾಗಿ ನಡೆಯಲಿದೆ . ಆನ್ಲೈನ್ ವಿಭಾಗದಲ್ಲಿ ವೃಕ್ಷ ಕೃಷ್ಣ , ಗೋಪಾಲ ಕೃಷ್ಣ , ಕೃಷ್ಣ ರೀಲ್ಸ್ ಸ್ಪರ್ಧೆಗಳು ನಡೆಯಲಿದೆ ಎಂದು ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅವರು ವಿವರ ನೀಡಿದರು.

ನವನೀತ್ ಕದ್ರಿಯವರು ಮತಾನಾಡಿ, ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ಮಕ್ಕಳಿಗೂ ಉಡುಗೊರೆ, ಪ್ರಶಂಸನಾ ಪತ್ರ ಹಾಗೂ ಭಗವದ್ಗೀತೆಯ ಪ್ರತಿಯನ್ನು ನೀಡಲಾಗುವುದು. ಪ್ರತಿ ವಿಭಾಗದ ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುತ್ತಿದ್ದು, ಪ್ರವೇಶ ಶುಲ್ಕ ಇರುವುದಿಲ್ಲ. ಸ್ಪರ್ಧಾ ಸ್ಥಳದಲ್ಲೇ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು .
ಸೆ. 4ರಂದು ಬೆಳಿಗ್ಗೆ 9ಕ್ಕೆ ಶ್ರೀಕೃಷ್ಣ ವರ್ಣ ವೈಭವ, ಬೆಳಿಗ್ಗೆ 10ಕ್ಕೆ ಮಹಿಳೆಯರಿಂದ ಸಾಂಪ್ರದಾಯಿಕ ಮೊಸರು ಕಡೆಯುವ ಕಾರ್ಯಕ್ರಮ ಹಾಗೂ ಮಧ್ಯಾಹ್ನ ಶ್ರೀಕೃಷ್ಣ ಜನ್ಮ ಮಹೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದರು .
ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕಲ್ಕೂರ ಅವರು ಮನವಿ ಮಾಡಿದರು.

ಮತ್ತೋರ್ವ ಪ್ರಮುಖರಾದ ಶಾರಾದ ಕಾಲೇಜಿನ ಪ್ರಾಂಶುಪಾಲರಾದ ದಯಾನಂದ ಕಟೀಲ್ ಅವರು ಪೂರಕ ಮಾಹಿತಿಗಳನ್ನು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಪ್ರಮುಖರಾದ ಸುಧಾಕರ್ ರಾವ್ ಪೇಜಾವರ, ಪ್ರಭಾಕರ ಜೋಶಿ, ತಾರಾನಾಥ ಶೆಟ್ಟಿ, ಶಿವಪ್ರಸಾದ್, ವಿಜಯಲಕ್ಷ್ಮಿ, ಮಂಜುಳಾ ಶೆಟ್ಟಿ, ಪೂರ್ಣಿಮಾ ಹಾಗೂ ಮತ್ತಿತರರ ಪ್ರಮುಖರು ಉಪಸ್ಥಿತರಿದ್ದರು.
_Sathish Kapikad



