
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ದ.ಕ.ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಜು.1ರಂದು ಬೆಳಗ್ಗೆ 11ಕ್ಕೆ ನಗರದಪತ್ರಿಕಾ ಭವನದಲ್ಲಿ ನಡೆಯಲಿದೆ. ಕರ್ನಾಟಕದಲ್ಲಿ ಪ್ರತಿ ವರ್ಷ ಜುಲೈ 1ರಂದು ‘ಪತ್ರಿಕಾ ದಿನಾಚರಣೆ’ಯನ್ನು ಆಚರಿಸಲಾಗುತ್ತದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪುಷ್ಪರಾಜ್ ಬಿ.ಎನ್, ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ವಿ.ಕರಿಕಾಲನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ನ್ಯೂಸ್ 18 ಕನ್ನಡ ವಾಹಿನಿಯ ಪ್ರಧಾನ ಸಂಪಾದಕ ಹರಿಪ್ರಸಾದ್ ಅಡ್ಡಂಗಾಯ ಉಪನ್ಯಾಸ ನೀಡಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಹಿರಿಯ ಪತ್ರಿಕಾ ವಿತರಕರಿಗೆ ಸನ್ಮಾನ ಹಾಗೂ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಿದ್ದಾರೆ.
ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು ಉಪಸ್ಥಿತರಿರುವರು ಎಂದು ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಿಕಾ ದಿನಾಚರಣೆ ಹಿನ್ನೆಲೆ: ಚರಿತ್ರೆ ಸೃಷ್ಟಿಸಿದ ‘ಮಂಗಳೂರ ಸಮಾಚಾರ‘
1841ರ ಜುಲೈ 1ರಂದು ‘ಮಂಗಳೂರ ಸಮಾಚಾರ‘ ಆರಂಭಗೊಳ್ಳುವ ಮೂಲಕ ಕನ್ನಡ ಪತ್ರಿಕೋದ್ಯಮದ ಚರಿತ್ರೆ ಸೃಷ್ಟಿಗೊಂಡಿತು. ಕನ್ನಡ ಭಾಷೆ ಇದರಲ್ಲಿ ಬಳಕೆಯಾದ ಕಾರಣ ಕನ್ನಡದ ಮೊದಲ ಪತ್ರಿಕೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಯಿತು. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಪ್ರತಿ ವರ್ಷ ಜುಲೈ 1ರಂದು ‘ಪತ್ರಿಕಾ ದಿನಾಚರಣೆ’ಯನ್ನು ಆಚರಿಸಲಾಗುತ್ತದೆ.
1843ರ ಜುಲೈ 1ರಂದು ರೆವರೆಂಡ್ ಹರ್ಮನ್ ಮೋಗ್ಲಿಂಗ್ ಅವರು ಆರಂಭಿಸಿದ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ದ ನೆನಪಿಗಾಗಿ ಮತ್ತು ಕನ್ನಡ ಪತ್ರಿಕೋದ್ಯಮದ ಇತಿಹಾಸವನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತದೆ
ಸ್ವಿಟ್ಜರ್ಲೆಂಡ್ನ ಬಾಸೆಲ್ನಿಂದ 1834ರಲ್ಲಿ ಭಾರತಕ್ಕೆ ಬಂದ ಮಿಷನರಿಗಳು ಇಲ್ಲಿ ಕೈಗಾರಿಕೆ, ವಿದ್ಯಾಸಂಸ್ಥೆ, ಮುದ್ರಣಾಲಯಗಳನ್ನು ಸ್ಥಾಪಿಸಿದರು. 1841ರಲ್ಲಿ ಬಾಸೆಲ್ ಮಿಶನ್ ಪ್ರೆಸ್- ಕಲ್ಲಚ್ಚಿನ ಮುದ್ರಣಾಲಯ ಸ್ಥಾಪಿಸಿ ಕನ್ನಡದಲ್ಲಿ ಮುದ್ರಣ ಕಾರ್ಯ ಪ್ರಾರಂಭಿಸಿದರು. ಕ್ರೈಸ್ತ ಮಿಷನರಿಗಳ ಬೋಧನಾ ಶಿಬಿರಗಳಲ್ಲಿ ಅಧ್ಯಾಪಕರಾಗಿದ್ದ ರೆವರೆಂಡ್ ಹರ್ಮನ್ ಮೋಗ್ಲಿಂಗ್ 1843ರ ಜುಲೈ 1ರಂದು ಆರಂಭಗೊಂಡ ‘ಮಂಗಳೂರ ಸಮಾಚಾರ’ ಪತ್ರಿಕೆಯ ಮೊದಲ ಸಂಪಾದಕರಾಗಿದ್ದರು.
_Sathish Kapikad


