
ಮಂಗಳೂರು, ಜೂನ್ 29 : ರಾಜ್ಯದಲ್ಲಿ 47 ಸಾವಿರಕ್ಕೂ ಹೆಚ್ಚು ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಬಡವರು ಹಾಗೂ ಸಾಮಾನ್ಯ ಜನರ ಅಭಿವೃದ್ಧಿಗೆ ಸಹಕಾರಿ ಬ್ಯಾಂಕ್‌ಗಳ ಕೊಡುಗೆ ಅಪಾರ. “ನಮಗೆ ಯಾವೂದೇ ರಾಜಕೀಯ ಪಕ್ಷವಿಲ್ಲ, ಸಹಕಾರಿ ಪಕ್ಷವೇ ನಮ್ಮ ಪಕ್ಷ. ಈ ಹಿನ್ನೆಲೆಯಲ್ಲಿ ಸಹಕಾರ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುವ ಮೂಲಕ ದೇಶದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು” ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಕರೆ ನೀಡಿದರು.

ಕೇಂದ್ರ ಸಹಕಾರ ಸಚಿವಾಲಯ ಸ್ಥಾಪನೆಯ ಐದು ವರ್ಷಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಎಸ್‌ಸಿಡಿಸಿಸಿ ಬ್ಯಾಂಕ್, ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಸೋಮವಾರ ( 29-06-2026)ದಂದು ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ “ವಿಶೇಷ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರು ದಕ್ಷಿಣ ಶಾಸಕರಾದ ವೇದವ್ಯಾಸ್ ಡಿ. ಕಾಮತ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಡಾ. ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಆಗಿದ್ದು, ಮಹಿಳೆಯರ ಆರ್ಥಿಕ ಸಬಲೀಕರಣದಲ್ಲಿ ಸಹಕಾರಿ ಸಂಘಗಳ ಪಾತ್ರ ಶ್ಲಾಘನೀಯ ಎಂದು ಹೇಳಿದರು.

ಬ್ಯಾಂಕಿನ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರಾದ ರವಿರಾಜ್ ಹೆಗ್ಡೆ, ಜಯಕರ ಶೆಟ್ಟಿ ಬಿ. ಇಂದ್ರಾಳಿ, ಹೆಚ್.ಎನ್. ರಮೇಶ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಎಸ್.ವಿ. ಹಿರೇಮರ್, ಸಿಇಓ ಗೋಪಾಲಕೃಷ್ಣ ಭಟ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇನ್ನೋರ್ವ ನಿರ್ದೇಶಕ. ಶಶಿಕುಮಾರ್ ರೈ ಬಾಲೊಟ್ಟು ಅತಿಥಿಗಳನ್ನು ಸ್ವಾಗತಿಸಿದರು.
_Sathish Kapikad


