
ಮಂಗಳೂರು, ನವೆಂಬರ್ 25 : ಆರೋಗ್ಯ ಸಂಪನ್ನ ಸಮಾಜದ ನಿರ್ಮಾಣ, ರಾಷ್ಟ್ರದ ಸುರಕ್ಷತೆ, ಲೋಕಕಲ್ಯಾಣ, ಸಮಾಜದ ಶಾರೀರಿಕ ಮತ್ತು ಮಾನಸಿಕ ಕಷ್ಟಗಳ ನಿವಾರಣೆಗಾಗಿ ಸನಾತನ ಸಂಸ್ಥೆಯ ವತಿಯಿಂದ ಇದೇ ನವೆಂಬರ್ 29, ಭಾನುವಾರ ಉಡುಪಿಯ ಕುಂಜಿಬೆಟ್ಟಿನ ಎಂ.ಜಿ.ಎಂ. ಕಾಲೇಜು ಮೈದಾನದಲ್ಲಿ ಭವ್ಯ ’ಶ್ರೀ ಮಹಾಧನ್ವಂತರಿ ಯಾಗ’ವನ್ನು ಆಯೋಜಿಸಲಾಗಿದೆ. ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ ನಡೆಯಲಿರುವ ಈ ಯಾಗದಲ್ಲಿ ಭಾಗವಹಿಸಲು ಈಗಾಗಲೇ 9,000 ಕ್ಕೂ ಅಧಿಕ ಭಕ್ತಾದಿಗಳು ಉಚಿತವಾಗಿ ನೋಂದಣಿ ಮಾಡಿಕೊಂಡಿದ್ದು, ಸುಮಾರು 15,000ಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಯಾಗದ ಆಯೋಜನಾ ಸಮಿತಿಯ ಸಂಯೋಜಕರಾದ ಶ್ರೀ .ಗುರುಪ್ರಸಾದ ಗೌಡ ಅವರು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
*ಪ್ರಾಚೀನ ಕಾಲದ ಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ಅವಶೇಷಗಳ ದರ್ಶನ!*
ಕ್ರಿ.ಶ. 1026 ರಲ್ಲಿ ಮಹಮ್ಮದ್ ಗಝನಿಯ ಆಕ್ರಮಣದಿಂದ ಸೋಮನಾಥ ದೇವಾಲಯವು ಧ್ವಂಸಗೊಂಡ ಇತಿಹಾಸ ಎಲ್ಲರಿಗೂ ತಿಳಿದಿದೆ. ಆ ಕಾಲದಲ್ಲಿ ದೇವಾಲಯದ ಪವಿತ್ರ ಜ್ಯೋತಿರ್ಲಿಂಗದ ಕೆಲವು ಭಾಗಗಳನ್ನು ಶ್ರದ್ಧಾವಂತ ಅರ್ಚಕರು ಸಂರಕ್ಷಿಸಿದ್ದರು ಎಂಬ ಮಾಹಿತಿಯಿದೆ. ಇಂತಹ ಪವಿತ್ರ ಅವಶೇಷಗಳನ್ನು ನೂರಾರು ವರ್ಷಗಳ ಕಾಲ ರಹಸ್ಯವಾಗಿ ಸಂರಕ್ಷಿಸಿಕೊಂಡು ಬರಲಾಗಿದೆ. ತಂಜಾವೂರಿನ ವೇದಕುಲಪತಿ ಶ್ರೀ ಜಿ.ಕೆ. ಸೀತಾರಾಮನ್ ಗುರೂಜಿಯವರು ಈ ಪವಿತ್ರ ಅವಶೇಷಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಅವುಗಳಲ್ಲಿ ನಾಲ್ಕು ಅವಶೇಷಗಳನ್ನು ಸನಾತನ ಸಂಸ್ಥೆಗೆ ಹಸ್ತಾಂತರಿಸಲಾಗಿದ್ದು , ಉಡುಪಿಯ ಶ್ರೀ ಮಹಾಧನ್ವಂತರಿ ಯಾಗದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಈ ಪ್ರಾಚಿನ ಕಾಲದ ಪವಿತ್ರ ಅವಶೇಷಗಳ ದರ್ಶನವು ಭಕ್ತಾದಿಗಳಿಗೆ ಅಪೂರ್ವ ಆಧ್ಯಾತ್ಮಿಕ ಅನುಭವವಾಗಲಿದೆ. ಸಮಸ್ತ ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಯೋಜನಾ ಸಮಿತಿಯು ಮನವಿ ಮಾಡಿದೆ.
ಪೂಜ್ಯ ರಮಾನಂದ ಗೌಡ : ಆರೋಗ್ಯ ಮತ್ತು ಲೋಕಕಲ್ಯಾಣಕ್ಕಾಗಿ ಯಾಗ-ಯಜ್ಞಗಳ ಮಹತ್ವ*
ಈ ಸಂದರ್ಭದಲ್ಲಿ ಮಾತನಾಡಿದ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂಜ್ಯ ರಮಾನಂದ ಗೌಡ, ಭಗವಾನ್ ಶ್ರೀ ಧನ್ವಂತರಿಯು ಮಹಾವಿಷ್ಣುವಿನ ಅವತಾರವಾಗಿದ್ದು, ಆಯುರ್ವೇದದ ಅಧಿದೇವತೆ ಹಾಗೂ ಸಮಸ್ತ ಜೀವಿಗಳಿಗೆ ಆರೋಗ್ಯವನ್ನು ಕರುಣಿಸುವ ದೇವತೆಯಾಗಿದ್ದಾರೆ. ಧನ್ವಂತರಿ ದೇವರ ಆರಾಧನೆಯು ಆರೋಗ್ಯ, ಆಯುಷ್ಯ ಮತ್ತು ಲೋಕಕಲ್ಯಾಣದ ಸಂಕಲ್ಪವನ್ನು ಒಳಗೊಂಡಿದೆ ಎಂದರು. ಪ್ರಸ್ತುತ ಜಗತ್ತು ಸಾಂಕ್ರಾಮಿಕ ರೋಗಗಳ ಭೀತಿ, ಹವಾಮಾನ ವೈಪರೀತ್ಯ, ಬರಗಾಲ, ಅತಿವೃಷ್ಟಿ-ಅನಾವೃಷ್ಟಿ, ಆಹಾರ ಭದ್ರತೆಯ ಆತಂಕ ಹಾಗೂ ಜಾಗತಿಕ ಸಂಘರ್ಷಗಳಂತಹ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸವಾಲುಗಳ ಸಂದರ್ಭದಲ್ಲಿ ಸಮಸ್ತ ಮಾನವಕುಲದ ಆರೋಗ್ಯ, ಪ್ರಕೃತಿಯ ಸಮತೋಲನ, ಆಹಾರ ಸಮೃದ್ಧಿ ಮತ್ತು ರಾಷ್ಟ್ರದ ಸುರಕ್ಷತೆಗಾಗಿ ಸಾಮೂಹಿಕವಾಗಿ ಪ್ರಾರ್ಥಿಸುವುದು ಅತ್ಯಂತ ಅಗತ್ಯವಾಗಿದೆ. ಯಾಗವೆಂದರೆ ಕೇವಲ ಅಗ್ನಿಗೆ ಆಹುತಿ ನೀಡುವ ಧಾರ್ಮಿಕ ವಿಧಿಯಲ್ಲ. ವೇದಮಂತ್ರಗಳ ಉಚ್ಛಾರಣೆ, ದೇವತಾರಾಧನೆ, ತ್ಯಾಗ ಮತ್ತು ಸಾಮೂಹಿಕ ಸಂಕಲ್ಪಗಳ ಮೂಲಕ ಸರ್ವರ ಕಲ್ಯಾಣವನ್ನು ಪ್ರಾರ್ಥಿಸುವ ಸನಾತನ ಧರ್ಮದ ಪ್ರಾಚೀನ ಉಪಾಸನಾ ಪದ್ಧತಿಯಾಗಿದೆ. ಯಾಗ-ಯಜ್ಞಗಳ ಮೂಲಕ ಸಮಾಜದಲ್ಲಿ ಧರ್ಮಶ್ರದ್ಧೆ, ಸಾತ್ತ್ವಿಕತೆ ಮತ್ತು ಆಧ್ಯಾತ್ಮಿಕ ಜಾಗೃತಿ ವೃದ್ಧಿಯಾಗುತ್ತದೆ ಎಂಬುದು ನಮ್ಮ ಶ್ರದ್ಧೆಯಾಗಿದೆ. ಸನಾತನ ಸಂಸ್ಥೆಯ ವತಿಯಿಂದ ಈವರೆಗೆ ಭಾರತದಲ್ಲಿ 1300 ಕ್ಕೂ ಅಧಿಕ ವಿವಿಧ ರೀತಿಯ ಯಾಗಗಳನ್ನು ಆಯೋಜಿಸಲಾಗಿದೆ. ಇದೇ ಪರಂಪರೆಯಲ್ಲಿ ಇದೀಗ ಉಡುಪಿಯ ಶ್ರೀಕೃಷ್ಣನ ಪವಿತ್ರ ಕ್ಷೇತ್ರದಲ್ಲಿ ಶ್ರೀ ಮಹಾಧನ್ವಂತರಿ ಯಾಗವನ್ನು ಆಯೋಜಿಸಲಾಗುತ್ತಿದೆ.
ಈ ಯಾಗದಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ ಸಂಸದರು, ಶಾಸಕರು ಭಾಗವಹಿಸುವರು, ಇದರಲ್ಲಿ ಮಂಗಳೂರು ಶಾಸಕರಾದ ವೇದವ್ಯಾಸ ಕಾಮತ್, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ, ಬಂಟ್ವಾಳದ ಶಾಸಕರಾದ ರಾಜೇಶ ನಾಯಕ, ಪುತ್ತೂರು ಶಾಸಕರಾದ ಅಶೋಕ ರೈ ಸೇರಿದಂತೆ ವಜ್ರದೇಹಿ ಮಠ ರಾಜಶೇಖರನಂದ ಸ್ವಾಮೀಜಿ, ಆನೆಗುಂದಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ, ಕೊಂಡೆವೂರು ಮಠದ ಯೋಗಾನಂದ ಸರಸ್ವತಿ ಸ್ವಾಮೀಜಿಯವರು, ಕರಿಂಜೆಯ ಮುಕ್ತಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಪೂಜ್ಯ ಸ್ವಾಮೀಜಿಯವರಿಗೂ ಆಹ್ವಾನ ನೀಡಲಾಗಿದೆ. ಇದರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಮುಖ ಉದ್ಯಮಿಗಳು, ಧರ್ಮಾಚಾರ್ಯರು, ವೈದ್ಯರು ಹಾಗೂ ಸಮಾಜದ ಗಣ್ಯರಿಗೆ ಆಮಂತ್ರಣ ನೀಡಲಾಗುತ್ತಿದೆ. ಒಟ್ಟಾರೆ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಟ್ಟು 5000 ಜನರು ತಮ್ಮ ಹೆಸರನ್ನು ಯಾಗಕ್ಕೆ ಬರಲು ನೊಂದಣೆ ಮಾಡಿಕೊಂಡಿದ್ದಾರೆ. ಅದಲ್ಲದೇ ಉಡುಪಿ ಅಷ್ಟ ಮಠದ ಸ್ವಾಮೀಜಿಗಳು ಪೇಜಾವರ ಮಠದ ವಿಶ್ವ ಪ್ರಸನ್ನ ಸ್ವಾಮೀಜಿ, ಅದಮಾರು ಮಠದ ಶ್ರೀ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿಯವರಿಗೆ,ಆಮಂತ್ರಣ ನೀಡಲಾಗಿದೆ. ಸಮಸ್ತ ಹಿಂದೂ ಸಮಾಜವು ಧರ್ಮಕಾರ್ಯಗಳಲ್ಲಿ ಒಗ್ಗಟ್ಟಿನಿಂದ ಭಾಗವಹಿಸಿ, ಆರೋಗ್ಯ ಸಂಪನ್ನ ಮತ್ತು ಸುರಕ್ಷಿತ ಭಾರತದ ಸಂಕಲ್ಪಕ್ಕೆ ಕೈಜೋಡಿಸಬೇಕೆಂದು ಪೂಜ್ಯರು ಕರೆ ನೀಡಿದರು.
ಈ ಯಾಗದಲ್ಲಿ ಅಮೂಲ್ಯ ಧರ್ಮಗ್ರಂಥಗಳು, ಸಾತ್ತ್ವಿಕ ಉತ್ಪನ್ನಗಳು ಮತ್ತು ಧಾರ್ಮಿಕ-ಆಧ್ಯಾತ್ಮಿಕ ವಿಷಯಗಳನ್ನು ಪರಿಚಯಿಸುವ ವಿಶೇಷ ಪ್ರದರ್ಶನವನ್ನೂ ಆಯೋಜಿಸಲಾಗಿದೆ. ಸಮಸ್ತ ಹಿಂದೂ ಬಾಂಧವರು ಕುಟುಂಬ ಸಮೇತರಾಗಿ ಆಗಮಿಸಿ ಭಗವಾನ್ ಶ್ರೀ ಧನ್ವಂತರಿ ದೇವರ ಕೃಪೆಗೆ ಹಾಗೂ ಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ದರ್ಶನಕ್ಕೆ ಪಾತ್ರರಾಗಬೇಕೆಂದು ಅವರು ವಿನಂತಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಶ್ರೀ ರಮಾನಂದ ಗೌಡ, ಆಯೋಜನಾ ಸಮಿತಿಯ ಸಂಚಾಲಕರಾದ ಶ್ರೀ ಗುರುಪ್ರಸಾದ ಗೌಡ, ಭಾಜಪ ಯುವಾ ಮೋರ್ಚಾದ ಜಿಲ್ಲಾ ಅಧ್ಯಕ್ಷರಾದ ಶ್ರೀ. ನಂದನ ಮಲ್ಲ್ಯ, ಸನಾತನ ಸಂಸ್ಥೆಯ ಲಕ್ಷ್ಮೀ ಪೈ, ಉದ್ಯಮಿಗಳಾದ ಶ್ರೀ ಎಂ ಜೆ ಶೆಟ್ಟಿ ಇವರು ಉಪಸ್ಥಿತರಿದ್ದರು.
*ಕಾರ್ಯಕ್ರಮ: ಶ್ರೀ ಮಹಾಧನ್ವಂತರಿ ಯಾಗ*
*ಆಯೋಜಕರು:* ಸನಾತನ ಸಂಸ್ಥೆ
*ದಿನಾಂಕ:* 29 ನವೆಂಬರ್ 2026, ಭಾನುವಾರ
*ಸಮಯ:* ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ
*ಸ್ಥಳ:* ಎಂ.ಜಿ.ಎಂ. ಕಾಲೇಜು ಮೈದಾನ, ಕುಂಜಿಬೆಟ್ಟು, ಉಡುಪಿ
*ಪ್ರವೇಶ:* ಕಡ್ಡಾಯ ನೋಂದಣಿ (ಉಚಿತ ನೋಂದಣಿ )
*ಆನ್‌ಲೈನ್ ನೋಂದಣಿ:*
https://www.sanatanrashtrashankhnad.in/events/shri-dhanvantari-mahayaag?lang=kn
ಶ್ರೀ. ವಿನೋದ್ ಕಾಮತ್, ಸನಾತನ ಸಂಸ್ಥೆ, ಸಂಪರ್ಕ: 9342599299
ಶ್ರೀ ಮಹಾಧನ್ವಂತರಿ ಯಾಗ ಸ್ವಾಗತ ಸಮಿತಿ, ಸಂಪರ್ಕ: 9343017001
Sathish Kapikad


