
ಮಂಗಳೂರು ನ.22: ನಗರದ ಸುತ್ತಮುತ್ತಲಿನಲ್ಲಿ ಕಾರ್ಯಾಚರಿಸುತ್ತಿರುವ 10 ಮಕ್ಕಳ ರಕ್ಷಣೆ ಮತ್ತು ಆರೈಕೆ ಕೇಂದ್ರದ ಸುಮಾರು 435 ಮಕ್ಕಳಿಗೆ ಒದಗಿದ ಸುವರ್ಣ ಅವಕಾಶ, ಸಂತಸ, ಸಂಭ್ರಮ, ಉತ್ಸಾಹದ ವಾತಾವರಣ, ಒಡನಾಟದ ಮರೆಯಲಾಗದ ಅನುಬಂಧ, ಪೋಷಕರ ಪ್ರೀತಿ- ವಾತ್ಸಲ್ಯದಿಂದ ವಂಚಿತರಾದ ಮುಗ್ಧ ಮಕ್ಕಳು ಇತರ ಕೇಂದ್ರದ ಮಕ್ಕಳ ಜತೆಗೆ ಬೆರೆತು, ಮುಕ್ತವಾಗಿ ತಮ್ಮ ವ್ಯಥೆ, ಕಥೆ, ಕಷ್ಟ, ಚಿಂತೆ, ವೇದನೆಯನ್ನು ಮರೆತು ಹುರುಪು ಹಾಗೂ ಉತ್ಸಾಹದಿಂದ ನಕ್ಕು ಕುಣಿದಾಡಿದರು.

ಸ್ನೇಹ ಮತ್ತು ಒಡನಾಟವನ್ನು ಸ್ಮರಿಸಿ ತಮ್ಮ ವೈಯಕ್ತಿಕ ವಿವಿಧ ಸಿಹಿ ಕಹಿ ಅನುಭವಗಳನ್ನು ವಿನಿಮಯ ಮಾಡಿಕೊಂಡರು. ಆಕರ್ಷಕ ಪಥ ಸಂಚಲನ ನೀಡಿದ ಬಳಿಕ ಕ್ರೀಡಾ ಸ್ಫೂರ್ತಿ ಮತ್ತು ಉತ್ಸಾಹದಿಂದ ತಮ್ಮಲ್ಲಿ ಹುದುಗಿದ ಕ್ರೀಡಾ ಸಾಮರ್ಥ್ಯ ಮತ್ತು ಗಾಯನ, ನೃತ್ಯ, ನಾಟಕ, ಕಲಾ ಕೌಶಲ್ಯ, ಪ್ರತಿಭೆಯನ್ನು ಪ್ರದರ್ಶಿಸಿ ಸಭಿಕರನ್ನು ರಂಜಿಸಿದರು. ಪ್ರತಿಯೊಬ್ಬರ ಮುಖದ ಮೇಲೆ ಮಂದಹಾಸ ಬೀರುತ್ತಿತ್ತು.

ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ ರೋಟರಿ 26ನೇ ವಾರ್ಷಿಕ ‘ಅಂತರ ಮಕ್ಕಳ ರಕ್ಷಣಾ ಮತ್ತು ಆರೈಕೆ ಕೇಂದ್ರದ ಚಿಣ್ಣರ ಉತ್ಸವ’ ವನ್ನು ತಾ.22.10.2026ರಂದು ನಗರದ ಕೆನರಾ ಹೈಸ್ಕೂಲ್ ಉರ್ವ ಪ್ರಾಂಗಣದಲ್ಲಿ ಆಯೋಜಿಸಲಾಗಿತ್ತು.

ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸ್ಪರ್ಧಾಕೂಟವನ್ನು ಉದ್ಘಾಟಿಸಿ, ರೋಟರಿ ಸಂಸ್ಥೆಯವರು ಚಿಣ್ಣರಿಗಾಗಿ ವಿನೂತನ ಪರಿಕಲ್ಪನೆಯನ್ನು ಆಯೋಜಿಸಿ ಪೋಷಕರ ಪ್ರೀತಿ ವಾತ್ಸಲ್ಯದಿಂದ ವಂಚಿತ ಮಕ್ಕಳ ಉತ್ಸಾಹಕ್ಕೆ ಸ್ಪಂದಿಸಿ ಪ್ರೋತ್ಸಾಹ ನೀಡುವ ರೋಟರಿ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವಾ ಮನೋಭಾವ ಪ್ರಶಂಸನೀಯ ಹಾಗೂ ದೇವರು ಮೆಚ್ಚುವ ಕಾರ್ಯ ಎಂದು ನುಡಿದು, ಯುವಕರು ವೈಯಕ್ತಿಕ ಶಿಸ್ತು ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಸಂಘಟನಾ ಅಧ್ಯಕ್ಷ ರೋ.ಡಾ. ದೇವದಾಸ್ ರೈ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಈ 26ನೇ ವಾರ್ಷಿಕ ಚಿಣ್ಣರ ಉತ್ಸವ ಕಾರ್ಯಕ್ರಮವು ತಮ್ಮ ಸಂಸ್ಥೆಯ ಸಮಾಜಸೇವಾ ಚಟುವಟಿಕೆಯ ಅಂಗವಾಗಿದ್ದು, ಮಕ್ಕಳ ಪ್ರತಿಭೆಯನ್ನು ಗುರುತಿಸಿ ವೇದಿಕೆಯನ್ನು ಒದಗಿಸಿ ಅವರ ಉತ್ಸಾಹಕ್ಕೆ ಸ್ಪಂದಿಸಿ, ಪ್ರೋತ್ಸಾಹಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರಿಸಿಕೊಳ್ಳುವುದು, ಒಂದು ದಿನದ ಉತ್ಸಾಹ, ಸಂತಸ ಹೊರಹೊಮ್ಮಿಸುವುದು ನಮ್ಮ ಸಂಸ್ಥೆಯ ಮುಖ್ಯ ಧ್ಯೇಯ, ಪ್ರಮುಖ ಉದ್ದೇಶ ಎಂದು ಮಾಹಿತಿ ನೀಡಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ ರೋ. ರವೀಂದ್ರ ಸ್ವಾಗತಿಸಿದರು. ಜಿಲ್ಲಾ ರೋಟರಿ ವಲಯ ಪ್ರತಿನಿಧಿಯಾದ ರೋ. ರಾಜೇಶ್ ಶೆಟ್ಟಿ ಗೌರವ ಅತಿಥಿಯಾಗಿ ಭಾಗವಹಿಸಿ, ಮಕ್ಕಳು ಕ್ರೀಡಾ ಸ್ಫೂರ್ತಿಯಿಂದ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ರೋಟರಾಕ್ಟ್ ಸಂಸ್ಥೆಯ ಅಧ್ಯಕ್ಷ ರೋ. ರಕ್ಷಣ್ ಟಿ.ಆರ್, ಕಾರ್ಯದರ್ಶಿ ರೋ. ಮುಖೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೋಟರಿ ಸಂಸ್ಥೆಯ ಕಾರ್ಯದರ್ಶಿ ರೋ. ಜ್ಯಾಕ್ಸನ್ ಸಲ್ಡಾನ್ಹ ವಂದಿಸಿದರು. ರೋ. ಕೆ.ಎಂ.ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ರೋಟರಿ ಮಾಜಿ ಗವರ್ನರ್ ರೋ. ಪ್ರಕಾಶ್ ಕಾರಂತ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸ್ಪರ್ಧಾ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪ್ರದಾನ ಮಾಡಿದರು.
Sathish Kapikad


