
ಮಂಗಳೂರು: ಕ್ರೀಡಾ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡು ಗಮನಾರ್ಹ ಸೇವೆ ಸಲ್ಲಿಸಿರುವ ‘ಬಸವಶ್ರೀ’ ಹಾಗೂ ‘ಸಾಧಕ ರತ್ನ’ ಪ್ರಶಸ್ತಿ ಪುರಸ್ಕೃತ ಕ್ರೀಡಾ ಅಂಕಣಕಾರ ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಅವರನ್ನು ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಆಡಳಿತ ಮಂಡಳಿ ಸಭೆಯ ಸಂದರ್ಭದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರೂ ಆಗಿರುವ ಎಸ್.ಜಗದೀಶ್ಚಂದ್ರ ಅಂಚನ್ ಅವರನ್ನು ಆಡಳಿತ ಮಂಡಳಿಯ ನಿರ್ದೇಶಕರು ಅಭಿನಂದನೆಯ ಮೂಲಕ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಹಿರಿಯ ನಿರ್ದೇಶಕ ವಿಶ್ವೇಶ್ವರ ಐತಾಳ್, ಕ್ರೀಡಾ ಕ್ಷೇತ್ರದ ಬೆಳವಣಿಗೆಗಳು ಹಾಗೂ ಸಾಧನೆಗಳನ್ನು ಜನರಿಗೆ ತಲುಪಿಸುವಲ್ಲಿ ಜಗದೀಶ್ಚಂದ್ರ ಅಂಚನ್ ಅವರ ಬರವಣಿಗೆ ಮಹತ್ವದ ಪಾತ್ರ ವಹಿಸಿದೆ. ಕ್ರೀಡೆಯ ಮೇಲಿನ ಆಸಕ್ತಿ, ನಿರಂತರ ಬರವಣಿಗೆ ಮತ್ತು ಸೇವಾ ಮನೋಭಾವಕ್ಕೆ ದೊರೆತಿರುವ ‘ಬಸವಶ್ರೀ’ ಹಾಗೂ ‘ಸಾಧಕ ರತ್ನ’ ಪ್ರಶಸ್ತಿಗಳು ಅವರ ಸಾಧನೆಗೆ ಸಂದ ಗೌರವವಾಗಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಎಸ್. ಜಗದೀಶ್ಚಂದ್ರ ಅಂಚನ್, ಕ್ರೀಡಾ ಪತ್ರಿಕೋದ್ಯಮದ ತಮ್ಮ ಪಯಣದಲ್ಲಿ ಪ್ರೋತ್ಸಾಹ ಹಾಗೂ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಮುಂದೆಯೂ ಕ್ರೀಡಾ ಕ್ಷೇತ್ರದ ಬೆಳವಣಿಗೆಗಳನ್ನು ದಾಖಲಿಸುವ ನಿಟ್ಟಿನಲ್ಲಿ ತಮ್ಮ ಪ್ರಯತ್ನ ಮುಂದುವರಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ರಾಘವ ಆರ್. ಉಚ್ಚಿಲ್, ನಿರ್ದೇಶಕರಾದ ದಿವಾಕರ ಶೆಟ್ಟಿ ಕೆ, ವಿಶ್ವೇಶ್ವರ ಐತಾಳ್, ಚಂದ್ರಕಲಾ ಕೆ, ಮೋಹನ್ ಎನ್, ವಿಶ್ವನಾಥ್ ಎನ್. ಅಮೀನ್, ಗೀತಾಕ್ಷಿ, ನಿಶಿತಾ ಜಯರಾಮ್ ಹಾಗೂ ಪ್ರೇಮ್‌ರಾಜ್ ಭಂಡಾರಿ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಪೂಜಾರಿ ಸ್ವಾಗತಿಸಿ, ವಂದಿಸಿದರು.
_Sathish Kapikad


